ಬೆಂಗಳೂರು, ಡಿ 09 (DaijiworldNews/MS): ತಮಿಳುನಾಡಿನ ಕೂನೂರ್ ನಲ್ಲಿ ಗುರುವಾರ ಸಂಜೆ ಸಂಭವಿಸಿದ ಹೆಲಿಕಾಪ್ಟರ್ ದುರಂತ ಘಟನೆಯಲ್ಲಿ ಗಂಭೀರ ಗಾಯಗೊಂಡು ಬದುಕುಳಿದಿರುವ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಅವರನ್ನು ವೆಲ್ಲಿಂಗ್ಟನ್ ನ ಸೇನಾ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಅವರ ತಂದೆ ಗುರುವಾರ ಹೇಳಿದ್ದಾರೆ. ಹೆಲಿಕಾಪ್ಟರ್ ದುರಂತದಲ್ಲಿ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತಿತರ 12 ಮಂದಿ ಸಾವನ್ನಪ್ಪಿದ್ದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ತಂದೆ ನಿವೃತ್ತ ಕರ್ನಲ್ ಕೆ.ಪಿ. ಸಿಂಗ್, ವೆಲ್ಲಿಂಗ್ಟನ್ ಗೆ ತೆರಳಿದ್ದು, ಮಾಧ್ಯಮದೊಂದಿಗೆ ಮಾತನಾಡಿದ ವರುಣ್ ಸಿಂಗ್ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ. ತಮ್ಮ ಪುತ್ರನ ಆರೋಗ್ಯ ಪರಿಸ್ಥಿತಿ ಕುರಿತಂತೆ ಏನನ್ನೂ ಹೇಳಲು ಸಾಧ್ಯವಿಲ್ಲ, ಯಾವುದನ್ನೂ ಖಚಿತತೆ ಇಲ್ಲ ಎಂದಿದ್ದಾರೆ.
ತಮ್ಮ ಪುತ್ರ ವರುಣ್ ಸಿಂಗ್ ಬಗ್ಗೆ ಹೆಮ್ಮೆಯಿದೆ. ಆತ ಫೈಟರ್ ಮತ್ತು ಈ ಜೀವನ್ಮರಣದ ಹೋರಾಟದಲ್ಲೂ ಗೆದ್ದು ಬರುತ್ತಾನೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಕೂನೂರು ಬಳಿ ನಡೆದ ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್ ಸಿಂಗ್. ಇವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ