ಬೆಂಗಳೂರು, ಡಿ.09 (DaijiworldNews/PY): "ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚುವಷ್ಟು ಗಂಭೀರ ಸ್ಥಿತಿ ಇಲ್ಲ. ಹಾಗಾಗಿ ರಾಜ್ಯದಲ್ಲಿ ಶಾಲೆಗಳಿಗೆ ಹೊಸದಾಗಿ ಯಾವುದೇ ಮಾರ್ಗಸೂಚಿ ಇಲ್ಲ" ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಯಾವುದೇ ಶಾಲೆಗಳಿಗೆ ಹೊಸದಾಗಿ ಮಾರ್ಗಸೂಚಿ ಇಲ್ಲ. ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರಿಯುತ್ತದೆ. ಬಿಇಒ, ಟಿಹೆಚ್ಒಗಳು ಮಾರ್ಗಸೂಚಿಗಳ ಪಾಲನೆ ಕುರಿತು ಮೇಲ್ವಿಚಾರಣೆ ಮಾಡಬೇಕು" ಎಂದು ಹೇಳಿದ್ದಾರೆ.
"ಎರಡು ಡೋಸ್ ಲಸಿಕೆ ಪಡೆಯದಿದ್ದರೆ ಶಾಲೆಗಳಿಗೆ ಪ್ರವೇಶವಿಲ್ಲ ಎನ್ನುವ ನಿಯಮ ತರಲು ಆಗುವುದಿಲ್ಲ. ಜಾಗೃತಿ ಮೂಡಿಸುವುದಷ್ಟೇ ನಮ್ಮ ಕೆಲಸ. ಶಾಲೆಗಳನ್ನು ಮುಚ್ಚುವಷ್ಟು ಗಂಭೀರ ಸ್ಥಿತಿ ಇಲ್ಲ. ಈ ಹಿನ್ನೆಲೆ ಶಾಲೆಗಳಿಗೆ ಹೊಸದಾಗಿ ಯಾವುದೇ ಮಾರ್ಗಸೂಚಿ ಇಲ್ಲ" ಎಂದಿದ್ದಾರೆ.