ಬೆಂಗಳೂರು, ಡಿ.09 (DaijiworldNews/PY): "ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಕನಸುಗಳನ್ನು ನನಸು ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ಧಾರೆ.
ವಿಧಾನಸೌದದ ಬಾಂಕ್ವೆಟ್ ಹಾಲ್ನಲ್ಲಿ ಡಿಆರ್ಡಿಒ ಹಾಗೂ ಡಿಎಫ್ಆರ್ಎಲ್ ವತಿಯಿಂದ ಆಯೋಜಿಸಿದ್ದ ಸಶಸ್ತ್ರ ಪಡೆಗಳಿಗೆ ಆಹಾರ ಹಾಗೂ ಲಾಜಿಸ್ಟಕ್ ನೆರವು ಕುರಿತ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, "ಈ ಘಟನೆಯಿಂದಾಗಿ ಇಡೀ ದೇಶವೇ ದಿಗ್ಬ್ರಾಂತಕ್ಕೆ ಒಳಗಾಗಿದೆ. ಹೆಲಿಕಾಪ್ಟರ್ ಏಕೆ ಪತನಗೊಂಡಿತು ಎನ್ನುವ ಕುರಿತು ಉನ್ನತ ಮಟ್ಟದ ತನಿಖೆ ಮುಗಿದ ನಂತರ ಸತ್ಯಾಂಶ ತಿಳಿಯಲಿದೆ" ಎಂದಿದ್ದಾರೆ.
"ಜನರಲ್ ಬಿಪಿನ್ ರಾವತ್ ಅವರು ದೇಶ ಕಂಡ ಅಪ್ರತಿಮ ನಾಯಕ. ಅವರು ಜೀವನದುದ್ದಕ್ಕೂ ದೇಶ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದರು. ಅವರು ದೇಶದ ಬಗ್ಗೆ ಕಂಡಿದ್ದ ಕನಸುಗಳನ್ನು ನನಸು ಮಾಡುವ ಕರ್ತವ್ಯ ಇಂದಿನ ಯುವಜನಾಂಗದ ಮೇಲಿದೆ" ಎಂದು ತಿಳಿಸಿದ್ದಾರೆ.
"ಬಿಪಿನ್ ರಾವತ್ ಅವರು ಕರ್ನಾಟಕದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಬೆಂಗಳೂರು, ಮಡಿಕೇರಿ ಮತ್ತಿತರ ಕಡೆ ಅನೇಕ ಸಲ ಬಂದಿದ್ದರು. ಭಾರತೀಯ ಸೇನಾ ಪಡೆಗೆ ನಮ್ಮ ರಾಜ್ಯವು ನೀಡಿರುವ ಕೊಡುಗೆಗಳ ಬಗ್ಗೆ ಅವರಿಗೆ ಅಪಾರವಾದ ಗೌರವವಿತ್ತು" ಎಂದಿದ್ದಾರೆ.
"ಪಾಕಿಸ್ತಾನ ವಿರುದ್ದ ವಾಯುದಾಳಿ, ಬರ್ಮಾ ವಿರುದ್ದ ಸರ್ಜಿಕಲ್ ಸ್ಟ್ರೈಕ್, ಚೀನಾ ಪಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದಾಗಿತ್ತು. ದೇಶವು ಸ್ವಾವಲಂಬಿ ಆಗಬೇಕು ಎನ್ನುವುದು ಅವರ ಚಿಂತನೆಯಾಗಿತ್ತು. ಹಾಗಾಗಿ ಅವರು ಆತ್ಮ ನಿರ್ಭರ್ ಯೋಜನೆಗೆ ಒತ್ತು ನೀಡಿದ್ದರು" ಎಂದು ಹೇಳಿದ್ದಾರೆ.