ಕೋಲ್ಕತ್ತಾ, ಡಿ 09 (DaijiworldNews/MS): ಪಶ್ಚಿಮ ಬಂಗಾಳದ ಜೈಲಿನಲ್ಲಿ ವಿಚಾರಣೆಯೇ ಇಲ್ಲದೆ 41 ವರ್ಷಗಳನ್ನು ಕಳೆದ ನೇಪಾಳಿ ವ್ಯಕ್ತಿಗೆ ಕಲ್ಕತ್ತಾ ಹೈಕೋರ್ಟ್ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ.
ಹೈಕೋರ್ಟ್ ಮಧ್ಯಸ್ಥಿಕೆಯ ನಂತರ 41 ವರ್ಷಗಳ ಕಾಲ ಜೈಲಿನಲ್ಲೇ ಕಳೆದ ದೀಪಕ್ ಜೋಶಿ ಅವರನ್ನು ಈ ವರ್ಷದ ಮಾರ್ಚ್ನಲ್ಲಿ ದಮ್ ದಮ್ ಸೆಂಟ್ರಲ್ ಕರೆಕ್ಷನಲ್ ಹೋಮ್ನಿಂದ ಬಿಡುಗಡೆ ಮಾಡಲಾಯಿತು
ಲೈವ್ ಲಾ ವರದಿಯ ಪ್ರಕಾರ, ಜೋಶಿ ಅವರನ್ನು ಮೇ 12, 1980 ರಂದು ಬಂಧಿಸಲಾಗಿತ್ತು. ಈ ವರ್ಷದ ಮಾರ್ಚ್ನಲ್ಲಿ ಬಿಡುಗಡೆಯಾಗುವವರೆಗೆ 41 ವರ್ಷಗಳ ಕಾಲ ಜೈಲಿನಲ್ಲೇ ಬಂಧಿಯಾಗಿದ್ದರು.
ಸಂಬಂಧಿತ ಅಧಿಕಾರಿಯಿಂದ ಜೋಶಿ ಅವರ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ವರದಿಯ ವಿಳಂಬದಿಂದಾಗಿ ಅವರು ವಿಚಾರಣೆಯಿಲ್ಲದೆ 40 ವರ್ಷಗಳ ಕಾಲ ಜೈಲಿನಲ್ಲಿಯೇ ದಿನದೂಡುವಂತಾಯಿತು.
ಅವರ ಬಿಡುಗಡೆಗೆ ಆದೇಶ ನೀಡುವ ಸಮಯದಲ್ಲಿ, ತೊಂದರೆಗೆ ಸಿಲುಕಿದ್ದ ಅವರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೇಳಿತ್ತು.