ದಿಬ್ರುಘರ್, ಡಿ 09 (DaijiworldNews/MS): ನಾಗಾಲ್ಯಾಂಡ್ ನಲ್ಲಿ ಡಿ.4 ರಂದು ಸೇನೆಯ ಪ್ಯಾರಾ-ಕಮಾಂಡೋಗಳ ಗುಂಡಿನ ದಾಳಿಯಲ್ಲಿ ಬದುಕುಳಿದ ಪ್ರಜೆಗಳ ಪೈಕಿ ಬದುಕಿ ಉಳಿದಿದ್ದ ಇಬ್ಬರ ಪರಿಸ್ಥಿತಿ ಈಗ ಗಂಭೀರವಾಗಿದೆ. ಸಂಬಂಧಿಕರಿಗೆ 13 ಮಂದಿ ಗ್ರಾಮಸ್ಥರ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಮಾತನಾಡದಂತೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ನಾಗಾಲ್ಯಾಂಡ್ ನ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ದಿಬ್ರುಗಢ್ನ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ (AMCH) ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ 30 ವರ್ಷದ ಯೆವಾಂಗ್ ಕೊನ್ಯಾಕ್ ಮತ್ತು 22 ವರ್ಷದ ಶೇವಾಂಗ್ ಕೊನ್ಯಾಕ್ ಅವರ ಸಂಬಂಧಿಕರು ಬುಧವಾರ ಈ ಹೇಳಿಕೆ ನೀಡಿದ್ದಾರೆ. ತಮ್ಮ ಹೆಸರು ಹೇಳಲು ಇಚ್ಚಿಸಿದ ವೈದ್ಯರೂ ಕೂಡಾ ಈ ವಿಚಾರವನ್ನು ದೃಢಪಡಿಸಿದ್ದಾರೆ.
ಇಬ್ಬರೂ ಗಾಯಾಳುಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಪೈಕಿ ಓರ್ವನಿಗೆ ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಮತ್ತೊಂದು ವೈದ್ಯಕೀಯ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಈಗ ಮೌನಕ್ಕೆ ಶರಣಾಗಿದ್ದು ತಮಗೆ ಮಾಧ್ಯಮಗಳೂ ಸೇರಿದಂತೆ ಯಾರೊಂದಿಗೂ ಈ ಘಟನೆಯ ಬಗ್ಗೆ ಮಾತನಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದಷ್ಟೇ ಹೇಳಿದ್ದಾರೆ.
"ದಯಮಾಡಿ ನಮ್ಮನ್ನುಏನನ್ನೂ ಕೇಳಬೇಡಿ. ಆ ಘಟನೆಯ ಬಗ್ಗೆ ಏನನ್ನೂ ಮಾತನಾಡದಂತೆ ಸೂಚನೆ ಬಂದಿದೆ" ಎಂದು ಬದುಕುಳಿದ ಇಬ್ಬರಲ್ಲಿ ಒಬ್ಬರ ಸಂಬಂಧಿ ಆಸ್ಪತ್ರೆಯಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.