ಕೂನೂರು ಡಿ 09 (DaijiworldNews/MS): ದುರಾದೃಷ್ಟವಶಾತ್ ತಮಿಳುನಾಡಿದ ವೆಲ್ಲಿಂಗ್ಟನ್ ಬಳಿಯ ಕೂನೂರಿನಲ್ಲಿ ಬುಧವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆ ಶುಕ್ರವಾರ ದೆಹಲಿಯ ಕಂಟೋನ್ಮೇಂಟ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಬುಧವಾರ ತಮಿಳುನಾಡಿನ ವೆಲ್ಲಿಂಗ್ಟನ್ ಬಳಿಯ ಕೂನೂರಿನಲ್ಲಿ ವಾಯುಸೇನೆಯ ಎಂ- 17ವಿ5 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.ದೇಶದ ಮೊಟ್ಟ ಮೊದಲ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ಅದರಲ್ಲಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಎಸ್ಸಿ ಹೊರತುಪಡಿಸಿ ಉಳಿದವರೆಲ್ಲರೂ ಸಾವನ್ನಪ್ಪಿದ್ದಾರೆ. ವರುಣ್ ಸಿಂಗ್ ವೆಲ್ಲಿಂಗ್ಟನ್ನಲ್ಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರದಂದು ರಾವತ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗುವುದು ಈ ಬಳಿಕ ಕಾಮರಾಜ್ ಮಾರ್ಗ್ ನಿಂದ ಬ್ರಾರ್ ಸ್ಕ್ವೇರ್ ಚಿತಾಗಾರದವರೆಗೂ ಮೆರವಣಿಗೆ ನಡೆಸಲಾಗುತ್ತದೆ.
ಜನರಲ್ ರಾವತ್ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ಅವರ ಪಾರ್ಥಿವ ಶರೀರ ಇಂದು ಸಂಜೆ ಸೇನಾ ವಿಮಾನದ ಮೂಲಕ ದೆಹಲಿ ತಲುಪುವ ನಿರೀಕ್ಷೆಯಿದೆ. ದುರಂತದಲ್ಲಿ ಯಾರೊಬ್ಬರ ಗುರುತು ಸಿಗಲಾರದಷ್ಟು ಶವಗಳು ಸುಟ್ಟು ಹೋಗಿವೆ. ಡಿಎನ್ಎ ಪರೀಕ್ಷೆ ಮೂಲಕ ಪತ್ತೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರ ವೆಲ್ಲಿಂಗ್ಟನ್ ನಲ್ಲಿರುವ ಮಿಲಿಟರಿ ನೆಲೆಗೆ ಮೃತದೇಹಗಳನ್ನು ತರಲಾಗುತ್ತದೆ.