ಬೆಂಗಳೂರು, ಡಿ 09 (DaijiworldNews/MS): ಕೋವಿಡ್-19 ರೂಪಾಂತರಿ ಒಮಿಕ್ರಾನ್ ನಿಯಂತ್ರಣ ಸಂಬಂಧ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಆ ಬಳಿಕ ಹೊಸ ಕೋವಿಡ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಕೊವೀಡ್ ಸಂಬಂಧ ಪ್ರತಿ ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದೇನೆ. ಒಮಿಕ್ರಾನ್ ಬಗ್ಗೆಯೂ ಮಾಹಿತಿ ಪಡೆದಿದ್ದು, ಬೇರೆ ದೇಶಗಳಲ್ಲಿ ಯಾವೆಲ್ಲಾ ಚಿಕಿತ್ಸೆ ನೀಡುತ್ತಾರೆ ಹೇಗೆ ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದೇನೆ. ಒಮಿಕ್ರಾನ್ ನಿಯಂತ್ರಣಕ್ಕೆ ಯಾವೆಲ್ಲಾ ಸಿದ್ದತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳ ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದಲ್ಲದೆ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ ಮುಂದುವರಿದರೆ ಸರ್ಕಾರ ಹೊಸದಾಗಿ ನಿರ್ಬಂಧಗಳನ್ನು ಜಾರಿಗೊಳಿಸಲಿದೆ ಎಂಬ ಸುಳಿವನ್ನು ಇದೇ ವೇಳೆ ನೀಡಿದ್ದಾರೆ. ಆದರೂ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹೊಸ ಮಾರ್ಗಸೂಚಿ ಮತ್ತು ನಿರ್ಬಂಧಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆಯೂ ತೀರ್ಮಾನ ಮಾಡುತ್ತೇವೆ ಬೂಸ್ಟರ್ ಡೋಸ್ ಬಗ್ಗೆಯೂ ಕೇಂದ್ರ ಸರ್ಕಾರ ಪರಿಶೀಲಿಸುತ್ತೇವೆ. ಹೆತ್ತವರು ಆತಂಕ ಪಡದೆ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಡಿಸೆಂಬರ್ ಹಾಗೂ ಜನವರಿಯಲ್ಲಿ ಕೋವಿಡ್ ನಿಯಂತ್ರಿಸುವುದು ಮತ್ತು ಹೊಸ ಮಾರ್ಗಸೂಚಿ ಬಿಡುಗಡೆಯ ಅಗತ್ಯತೆಯನ್ನು ವಿವರವಾಗಿ ಸಂಪುಟ ಸಭೆ ಚರ್ಚಿಸಲಿದೆ. ಹೊಸ ಮಾರ್ಗಸೂಚಿ ಬಿಡುಗಡೆಯಾಗುವುದಾದರೆ ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಸಿಎಂ ಹೇಳಿದ್ದಾರೆ.