Santhosh M
ನವದೆಹಲಿ, ಡಿ.08 (DaijiworldNews/SM): ಭಾರತೀಯ ಸೇನೆಯ ಹಿರಿಯ ದಂಡನಾಯಕ ರಕ್ಷಣಾವಲಯದ ಮುಂದಾಳು ಸಿಡಿಎಸ್ ಬಿಪಿನ್ ರಾವತ್ ಇಂದು ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದಾರೆ. ಆದರೆ, ಬಿಪಿನ್ ರಾವತ್ ಸೇನೆಗೆ ವಿಶಿಷ್ಟ ಸೇವೆಯನ್ನು ಸಲ್ಲಿಸಿದ್ದಾರೆ. ಶತ್ರುವಿನ ಗುಂಡಿನ ದಾಳಿಗೆ ಎದೆಯೊಡ್ಡುವ ಗಂಡೆದೆ ಹೊಂದಿದ್ದ ಬಿಪಿನ್ ದೇಹದಲ್ಲಿ ವೀರತನವೆಂಬ ನೆತ್ತರು ಹರಿಯುತ್ತಿತ್ತು. ಕಳೆದ ನಾಲ್ಕು ದಶಕಗಳಿಂದ ಬಂಡೆಕಲ್ಲಿನಂತೆ ಮುನ್ನುಗ್ಗುತ್ತಿದ್ದ ರಾವತ್ ಊಹೆಗೂ ನಿಲುಕದ ಸೇವೆಯನ್ನು ನೀಡಿದ್ದು, ಇಂದು ಇತಿಹಾಸವಾಗಿದೆ.
ಯೋಧರ ಕುಟುಂಬದಲ್ಲೇ ಹುಟ್ಟಿದ ರಾವತ್ ರಕ್ತದಲ್ಲಿತ್ತು ವೀರತನ:
ರಾವತ್ ಹುಟ್ಟುವ ಮುನ್ನವೇ ಅವರ ಕುಟುಂಬ ಯೋಧರನ್ನು ಹೊಂದಿತ್ತು. ಶೌರ್ಯವಂತ ರಾವತ್ ಕುಟುಂಬವಾಗಿತ್ತು. ಗಂಡೆದೆಯ ಕಲ್ಲು ಬಂಡೆಯ ಗುಂಡಿಗೆಯವರೇ ಕುಟುಂಬದಲ್ಲಿ ಹುಟ್ಟಿಬಂದಿದ್ದರು. ಸೈನಿಕರ ಕುಟುಂಬವಾಗಿದ್ದರಿಂದ ಬಿಪಿನ್ ಅವರ ರಕ್ತದಲ್ಲಿ ವೀರತನ ಹರಿಯುತ್ತಿತ್ತು. ಬಿಪಿನ್ ರಾವತ್ ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಕೂಡ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಬಿಪಿನ್ ರಾವತ್ ಅವರ ಚಿಕ್ಕಪ್ಪ ಹರಿನಂದನ್, ಭರತ್ ಸಿಂಗ್ ರಾವತ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಭಾರತೀಯ ಸೈನ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡಿ ನಿವೃತ್ತಿ ಗೊಂಡಿದ್ದರು. ಇವರ ಮಕ್ಕಳು ಸಹ ಭಾರತೀಯ ಸೈನ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಬಿಪಿನ್ ರಾವತ್ ಅವರ ಸೇನೆಯ ನಾಲ್ಕು ದಶಕಗಳ ಅಧ್ಯಾಯ ಅಂತ್ಯ:
ಭಾರತೀಯ ಸೇನೆಯಲ್ಲಿ ಸೈನಿಕನಾಗಬೇಕು. ದೇಶಕ್ಕಾಗಿ ಪ್ರಾಣ ಒತ್ತೆಯಿಟ್ಟು ಭಾರತಾಂಬೆಯ ಮಾನ ಉಳಿಸುವ ಮಹದಾಸೆಯೊಂದಿಗೆ ಸೇನಾ ರಣಾಂಗಣಕ್ಕೆ ಧುಮುಕಿದ್ದ ರಾವತ್ ಅವರ ನಾಲ್ಕು ದಶಕಗಳ ಸುದೀರ್ಘ ಪಯಣದ ಅಧ್ಯಾಯಕ್ಕೆ ಇಂದು ತೆರೆ ಬಿದ್ದಿದೆ. ದೇಶ ರಕ್ಷಣೆಯ ಸೇವೆಯಲ್ಲಿದ್ದಾಗಲೇ ಹೆಲಿಕಾಪ್ಟರ್ ಪತನದ ಕರಾಳ ಘಟನೆಯಲ್ಲಿ ಸೇನೆ ಹಾಗೂ ಇಹ ಲೋಕದ ಪಯಣಕ್ಕೆ ಪೂರ್ಣ ವಿರಾಮ ನೀಡಿದ್ದಾರೆ. ಆದರೆ, ಕಳೆದ ನಾಲ್ಕು ದಶಕಗಳ ಸೇವೆಯಂತೂ ದೇಶಕ್ಕೆ ಅಮೂಲ್ಯವಾಗಿದ್ದು, ಎಂದೆಂದೂ ಅಳಿಸಿ ಹೋಗದ ಕೊಡುಗೆಯಾಗಿದೆ.
ತಾನು ಕಂಡಿದ್ದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದ ಅವರು, 1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ನಿಯುಕ್ತಿಗೊಳ್ಳುತ್ತಾರೆ. ಅಲ್ಲಿಂದ ನಿರಂತರವಾಗಿ ಸೇನೆಗೆ ತಮ್ಮ ಅಮೂಲ್ಯ ಸೇವೆಯನ್ನು ಬಿಪಿನ್ ನೀಡಿದ್ದಾರೆ. ಬ್ರಿಗೇಡ್ ಕಮಾಂಡರ್, ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಸದರ್ನ್ ಕಮಾಂಡ್, ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2, ಕರ್ನಲ್ ಮಿಲಿಟರಿ ಕಾರ್ಯದರ್ಶಿ ಮತ್ತು ಉಪ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ನೀಡಿದ್ದು, ಮಿಲಿಟರಿ ಕಾರ್ಯದರ್ಶಿಯ ವಿಭಾಗ ಮತ್ತು ಜೂನಿಯರ್ ಕಮಾಂಡ್ ವಿಂಗ್ನಲ್ಲಿ ಹಿರಿಯ ಬೋಧಕರಾಗಿಯೂ ರಾವತ್ ಸೇವೆ ಸಲ್ಲಿಸಿದ್ದಾರೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಕೂಡ ಕೆಲಸ ಮಾಡಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್ಗೆ ಕಮಾಂಡರ್ ಆಗಿ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸಿದ್ದರು. 1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೇನೆ ಮುಖಾಮುಖಿ ಸಂದರ್ಭ ಬಿಪಿನ್ ರಾವತ್ ನೇತೃತ್ವದ ಬೆಟಾಲಿಯನ್ ಪ್ರಮುಖ ಪಾತ್ರ ವಹಿಸಿತ್ತು. ಶತ್ರುಗಳ ವಿರುದ್ಧದ ಹೋರಾಟಕ್ಕೆ ಎಂದೆಂದೂ ರಾವತ್ ಮುಂದು ಎನ್ನುವುದನ್ನು ಸಾಬೀತುಪಡಿಸಿದ್ದರು.
2015ರಲ್ಲಿ ಮಯನ್ಮಾರ್ ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಬಿಪಿನ್ ರಾವತ್ ಅವರ ಪಾತ್ರವಿತ್ತು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ಕೂಡ ರಾವತ್ ವಹಿಸಿದ್ದರು. 2016ರ ಜನವರಿ 1ರಂದು ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಸದರ್ನ್ ಕಮಾಂಡ್ ಆಗಿ ನೇಮಕಗೊಂಡಿದ್ದರು. ಕೇವಲ 9 ತಿಂಗಳಲ್ಲಿಯೇ ಅಂದರೆ ಸೆಪ್ಟೆಂಬರ್ 1, 2016ರಂದು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಡಿಸೆಂಬರ್ 17, 2016ರಂದು ಬಿಪಿನ್ ರಾವತ್ 27ನೇ ಭೂ ಸೇನಾ ಮುಖ್ಯಸ್ಥರಾಗಿ ಆಯ್ಕೆಗೊಂಡರು. 2020 ಜನವರಿಯಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ನೇಮಕವಾಗಿ ಇಂದಿನ ತನಕ ಸೇವೆಯನ್ನು ಸಲ್ಲಿಸಿ ಹುತಾತ್ಮರಾಗಿದ್ದಾರೆ.
‘ಸರ್ಜಿಕಲ್ ಸ್ಟ್ರೈಕ್’ ಸೂತ್ರದಾರರಾಗಿದ್ದ ಬಿಪಿನ್:
ದೇಶದೆಲ್ಲೆಡೆ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ ಸೂತ್ರದಾರ ರಾವತ್ ಆಗಿದ್ದರು. 2016ರಲ್ಲಿ ನಡೆದ ಉರಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಅಲ್ಲದೆ, ಮತ್ತೊಮ್ಮೆ ತಂಟೆಗೆ ಬಂದಲ್ಲಿ ಮತ್ತಷ್ಟು ಪ್ರಕರವಾದ ದಾಳಿ ನಡೆಸುವ ಎಚ್ಚರಿಕೆಯನ್ನು ಕೂಡ ಅವರು ನೀಡಿದ್ದರು. ಇನ್ನು 2015ರ ಮಯನ್ಮಾರ್ ಟೆರರ್ ಆಪರೇಷನ್ ನ ಮಾಸ್ಟರ್ ಮೈಂಡ್ ಇವರೇ ಆಗಿದ್ದರು. 1987ರಲ್ಲಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಲ್ಲೂ ಕೂಡ ಇವರ ಪಾತ್ರ ಪ್ರಮುಖವಾದುದು. ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ದಿಟ್ಟವಾದ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿದ್ದರು.
ಸದ್ಯ ವೀರ ಯೋಧರನ್ನು ಕಳೆದುಕೊಂಡಿರುವ ದೇಶ, ಸೇನೆ ಅನಾಥವಾಗಿದೆ. ರಾವತ್ ಸ್ಥಾನ ಮತ್ತೊಬ್ಬರಿಂದ ಭರಿಸಲು ಅಸಾಧ್ಯವಾಗಿದ್ದರೂ, ಅವರು ನಿರ್ವಹಿಸುತ್ತಿರುವ ಪದವಿಗೆ ಮತ್ತೊಬ್ಬ ದಂಡನಾಯಕನನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನೇಮಿಸಲಿದೆ. ಆದರೆ, ಕಳೆದು ಕೊಂಡಿರುವುದು ಬೆಲೆ ಕಟ್ಟಲಾಗದ ಮುತ್ತುರತ್ನವೊಂದನ್ನು ಎನ್ನುವುದು ಇಂದು ದೇಶವೇ ನೆನಪಿಸಿಕೊಂಡು ಕೊರಗುತ್ತಿದೆ.