ನವದೆಹಲಿ, ಡಿ.08 (DaijiworldNews/SM): ದೇಶವೇ ಅರಗಿಸಿಕೊಳ್ಳಲಾಗದ ಕರಾಳ ಘಟನೆಗೆ 2021ರ ಡಿಸೆಂಬರ್ 8ರ ಬುಧವಾರ ಸಾಕ್ಷಿಯಾಗಿದ್ದು, ದೇಶದ ಭದ್ರತೆ ಕಾಪಾಡುವ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥ ಕರ್ತವ್ಯದಲ್ಲಿದ್ದಾಗಲೇ ಹೆಲಿಕಾಪ್ಟರ್ ಪತನದಿಂದಾಗಿ ಹುತಾತ್ಮರಾಗಿದ್ದಾರೆ. ಆದರೆ, ಅವರು ಪ್ರಯಾಣ ಬೆಳೆಸುತ್ತಿರುವ ಹೆಲಿಕಾಪ್ಟರ್ ಸಾಮಾನ್ಯ ಹೆಲಿಕಾಪ್ಟರ್ ಆಗಿರಲಿಲ್ಲ. ಭಾರತೀಯ ಸೇನಾ ವಿಭಾಗದಲ್ಲೇ ವಿಶಿಷ್ಟ ಹಿನ್ನೆಲೆಯುಲ್ಲ ಹೆಲಿಕಾಪ್ಟರ್ ಇದಾಗಿತ್ತು. ವಿಶಿಷ್ಟ ಹಿನ್ನೆಲೆಯನ್ನು ಹೊಂದಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿರುವುದು ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಎಲ್ಲಾ ಸಂದಿಗ್ಧ ಸಂದರ್ಭಗಳಲ್ಲೂ ಎದೆಯೊಡ್ಡಿ ಮುನ್ನುಗ್ಗುತ್ತಿದ್ದ MI 17 V-5 ಹೆಲಿಕಾಪ್ಟರ್:
ಭಾರತೀಯ ಸೇನೆಯ ಮೂರೂ ವಿಭಾಗಗಳಲ್ಲೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಬಿಪಿನ್ ರಾವತ್, ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ MI 17 V-5 ವಿಶಿಷ್ಟ ಹಿನ್ನೆಲೆಯನ್ನು ಒಳಗೊಂಡಿದೆ. ಅಸಾಮಾನ್ಯವಾಗಿದ್ದ ಹೆಲಿಕಾಪ್ಟರ್ ಎಲ್ಲಾ ಸಂದರ್ಭಗಳಲ್ಲೂ ಎದೆಯೊಡ್ಡಿ ಮುನ್ನುಗ್ಗುತ್ತಿತ್ತು. ಎಂತಹ ಪ್ರತಿಕೂಲ ಹವಾಮಾನವಿದ್ದರೂ ಅವುಗನ್ನು ಎದುರಿಸುವ ಸಾಮಾರ್ಥ ಈ ಹೆಲಿಕಾಪ್ಟರ್ ಹೊಂದಿತ್ತು. ಹಗಲು, ರಾತ್ರಿಯಲ್ಲೂ ಅತ್ಯಂತ ಪ್ರಕರವಾದ ಕಾರ್ಯ ನಿರ್ವಹಣ ಕ್ಷಮತೆಯನ್ನು ಇದು ಒಳಗೊಂಡಿತ್ತು.
ರಷ್ಯಾ ದೇಶದ ಕಂಪೆನಿಯೊಂದು ಈ MI 17 V-5 ಹೆಲಿಕಾಪ್ಟರನ್ನು ತಯಾರಿಸಿ ಬಳಿಕ ಭಾರತದ ಸೇನಾಪಡೆಗೆ ಹಸ್ತಾಂತರಿಸಿತ್ತು. ಅತ್ಯುನ್ನತ ಸೇನಾ ಸಾರಿಗೆ ಹೆಲಿಕಾಪ್ಟರ್ ಆಗಿದ್ದ MI 17 V-5ಯನ್ನು ಸೇನಾ ಸಿಬ್ಬಂದಿಗಳು, ಸರಕು, ಉಪಕರಣಗಳ ಸಾಗಾಟಕ್ಕಾಗಿ ವಿನ್ಯಾಸಗೊಳಿಸಲಾಗಿತ್ತು. ಗಂಟೆಗೆ 250 ಕಿ.ಮೀ. ವೇಗದಲ್ಲಿ ಹಾರುವ ಸಾಮರ್ಥ್ಯ MI 17 V-5 ಹೊಂದಿತ್ತು. ಅಲ್ಲದೆ, 6000 ಮೀಟರ್ ಎತ್ತರದಲ್ಲಿ ಇದರ ಹಾರಾಟವಿತ್ತು. ಮರುಭೂಮಿ, ಸಾಗರ, ಪರ್ವತ, ಉಷ್ಣವಲಯದಲ್ಲೂ ಭಾರೀ ರಕ್ಷಣೆಯೊಂದಿಗೆ MI 17 V-5 ಮುನ್ನುಗ್ಗುತ್ತಿತ್ತು. ಈ ಹೆಲೆಕಾಪ್ಟರ್ ನಲ್ಲಿ ಸ್ಟಾರ್ ಬೋರ್ಡ್, ಸ್ಲೈಡಿಂಗ್ ಡೋರ್, ಪ್ಯಾರಾಚೂಟ್ ಉಪಕರಣಗಳು, ಸರ್ಚ್ ಲೈಟ್, ತುರ್ತು ಪ್ಲೋಟೇಶನ್ ವ್ಯವಸ್ಥೆ ಇದೆ.
ವಿಐಪಿಗಳ ಪ್ರಯಾಣಕ್ಕೆ ಮೀಸಲಾಗಿದ್ದ ಹೆಲಿಕಾಪ್ಟರ್:
ಇನ್ನು ಈ ಹೆಲಿಕಾಪ್ಟರ್ ಸೇನೆಯ ಪ್ರಮುಖ ಅಧಿಕಾರಿಗಳು ಹಾಗೂ ದೇಶದ ವಿಐಪಿಗಳ ಪ್ರಯಾಣಕ್ಕೆ ಬಳಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೂ ಇದನ್ನೇ ಬಳಕೆ ಮಾಡಲಾಗುತ್ತದೆ. ಅಂದರೆ, ಎಲ್ಲಾ ಸಂದರ್ಭಗಳಿಗೂ ಒಗ್ಗಿಕೊಳ್ಳುವಷ್ಟು ತೀಕ್ಷ್ಣ್ಣವಾದ ಸಾಮಾರ್ಥ್ಯ ಹೊಂದಿತ್ತು. ಎಲ್ಲಾ ರೀತಿಯ ಭದ್ರತೆಯನ್ನು ಪರಿಶೀಲಿಸಿ, ಸುರಕ್ಷತಾ ವ್ಯವಸ್ಥೆಯನ್ನು ಅನುಸರಿಸಿ ಹಾರಾಟ ನಡೆಸುತ್ತಿತ್ತು.
MI 17 V-5 ಸೇನಾ ಹೆಲಿಕಾಪ್ಟರ್ ಪತನದ ಸುತ್ತ ನೂರಾರು ಪ್ರಶ್ನೆಗಳು
ತಮಿಳುನಾಡಿನ ಕನೂಲ್ ಬಳಿ ಪತನಗೊಂಡ ಸೇನಾ ಹೆಲಿಕಾಪ್ಟರ್ ವಿಶಿಷ್ಟತೆಗಳಿಂದ ಕೂಡಿದ್ದರೂ ಹೇಗೆ ಅಪಘಾತಕ್ಕೆ ಒಳಗಾಯಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ವಿಐಪಿಗಳು ಪ್ರಯಾಣಿಸುವ ಹೆಲಿಕಾಪ್ಟರ್ ಭದ್ರತಾ ದೃಷ್ಠಿಯಲ್ಲಿ ಗಮನಿಸಿದ್ದಲ್ಲಿ ಎಲ್ಲಾ ರೀತಿಯಲ್ಲಿ ವ್ಯವಸ್ಥಿತವಾಗಿರುತ್ತದೆ. ಹೆಲಿಕಾಪ್ಟರ್ ಹಾರಾಟದ ಮೊದಲು ಎಂಜಿನ್ ಸೇರಿದಂತೆ ಹೆಲಿಕಾಪ್ಟರ್ ಪರಿಶೀಲನೆ ನಡೆಸಿಯೇ ಹಾರಾಟ ಆರಂಭಿಸಲಾಗುತ್ತದೆ. ಆದರೆ, ಎಂಜಿನ್ ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎನ್ನುವುದು ಆರಂಭಿಕ ಮಾಹಿತಿ.
ಇನ್ನು ಕಾಡಿನ ನಡುವೆ ಹಾರಾಟದ ಸಂದರ್ಭದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿತೇ? ಎನ್ನುವುದು ಮತ್ತೊಂದೆಡೆ ಕಾಡುತ್ತಿರುವ ಸಂಶಯ. ಪ್ರತಿಕೂಲ ಹವಾಮಾನವಿದ್ದಿದ್ದರೆ ಮೊದಲೇ ಈ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಅಷ್ಟಾಗಿಯೂ, ಪ್ರತಿಕೂಲ ಹವಾಮಾನ ಎದುರಿಸುವ ಸಾಮಾರ್ಥ್ಯ ಹೊಂದಿದ್ದ ಹೆಲಿಕಾಪ್ಟರ್ ಪತನಗೊಳ್ಳಲು ಸಾಧ್ಯವೇ ಎನ್ನುವುದು ಸದ್ಯದ ಪ್ರಶ್ನೆ. ಮತ್ತೊಂದೆಡೆ ಹಿರಿಯ ಅಧಿಕಾರಿಗಳು ಪ್ರಯಾಣಿಸುವ ಸಂದರ್ಭದಲ್ಲಿ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಬೇಕು. ಇದನ್ನು ಸಮರ್ಪಕವಾಗಿ ನಡೆಸಿಲ್ಲವೇ ಅನ್ನೋದು ಮತ್ತೊಂದು ಅನುಮಾನ. ಇನ್ನೊಂದೆಡೆ ಕಾಡು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಎತ್ತರದ ಮರುಗಳು ಕೂಡ ಬೆಳೆದು ನಿಂತಿದ್ದು, ಇದಕ್ಕೆ ಡಿಕ್ಕಿ ಹೊಡೆದಿದೆಯಾ ಎನ್ನುವ ಶಂಕೆ ಕೂಡ ಇದೆ.
ಸದ್ಯ ಹೆಲಿಕಾಪ್ಟರ್ ಪತನದ ವಿಚಾರವನ್ನು ಉನ್ನತ ತನಿಖೆಗೆ ವಹಿಸಲಾಗಿದ್ದು, ಮತ್ತೊಂದೆಡೆ ಬ್ಲ್ಯಾಕ್ ಬಾಕ್ಸ್ ಗಾಗಿ ಶೋಧಕಾರ್ಯಕೂಡ ನಡೆಸಲಾಗುತ್ತಿದೆ. ಸಮಗ್ರ ತನಿಖೆಯ ಬಳಿಕ ಘಟನೆಯ ನೈಜ ಚಿತ್ರಣ ಹೊರ ಬೀಳಲಿದೆ.