ನವದೆಹಲಿ, ಡಿ.08 (DaijiworldNews/SM): ದೇಶದ ಸೇನಾಪಡೆಯನ್ನು ಮುನ್ನಡೆಸುತ್ತಿದ್ದ ಧೀಮಂತ ಯೋಧ ಜನರಲ್ ಬಿಪಿನ್ ರಾವತ್ ಇಂದು ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯಕಂಡಿದ್ದಾರೆ. ದೇಶದ ಮೂರೂ ಸೇನಾಪಡೆಗಳಲ್ಲೂ ವಿಶಿಷ್ಟ ಸೇವೆ ನೀಡಿದ ಯೋಧ ಈ ಹಿಂದೆಯೇ ಸಾವು ಗೆದ್ದುಬಂದಿದ್ದರು.
ಆರು ವರ್ಷಗಳ ಹಿಂದೆ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಬಿಪಿನ್ ರಾವತ್ ಸಾವು ಗೆದ್ದು ಬಂದಿದ್ದರು. ಬುಧವಾರದಂದು ತಮಿಳುನಾಡಿನ ಕೂನುರು ಸಮೀಪ ನಡೆದ ಅವಘಡ ಆರು ವರ್ಷ ಹಿಂದಿನ ಪವಾಡವನ್ನು ನೆನಪಿಸಿತ್ತು. ಇಂದಿನ ಘಟನೆಯಲ್ಲೂ ಬದುಕಿ ಬರಲೆಂದು ಕೋಟ್ಯಾಂತರ ದೇಶಭಕ್ತರು ಪ್ರಾರ್ಥಿಸಿಕೊಂಡರೂ, ರಾವತ್ ಮಾತ್ರ ಅಮರರಾಗಿದ್ದರು.
2015ರ ಫೆಬ್ರವರಿ 3ರಂದು ನಾಗಾಲ್ಯಾಂಡ್ನ ದಿಮಾಪುರ್ನಲ್ಲಿ ಚೀತಾ ಹೆಲಿಕಾಪ್ಟರ್ ಪತನಗೊಂಡಿದ್ದರು. ಈ ಹೆಲಿಕಾಪ್ಟರ್ ನಲ್ಲಿ ರಾವತ್ ಕೂಡ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ ಅವರು ಲೆಫ್ಟಿನೆಂಟ್ ಜನರಲ್ ಆಗಿ ಸೇವೆಯಲ್ಲಿದ್ದರು. ದಿಮಾಪುರದಲ್ಲಿ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. ಎಂಜಿನ್ ವೈಫಲ್ಯದಿಂದ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್ಗಳು ಮತ್ತು ಕರ್ನಲ್ ಕೂಡ ಬದುಕುಳಿದಿದ್ದರು. ಜನರಲ್ ರಾವತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಅಂದು ಸಾವು ಗೆದ್ದು ಬಂದಿದ್ದ ರಾವತ್ ಇಂದು ಹುತಾತ್ಮರಾಗಿದ್ದಾರೆ.