ಬೆಂಗಳೂರು, ಡಿ.08 (DaijiworldNews/PY): "ಭ್ರಷ್ಟ ಬಿಜೆಪಿಯಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ. ಅನುಮೋದನೆಗೊಂಡ ಹಣದಲ್ಲಿ 40% ಭ್ರಷ್ಟರ ಹೊಟ್ಟೆಗೆ, ಉಳಿದಿದ್ದು ಕಳಪೆ ಕಾಮಗಾರಿಗೆ" ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಟೆಂಡರ್ ಅನುಮೋದನೆಗೆ, ಬಿಲ್ ಪಾವತಿಗೆ, ಕಾಮಗಾರಿ ಆರಂಭಕ್ಕೆ, ಮೇಲಿನವರಿಂದ ಕೆಳಗಿನವರವರೆಗೂ, ಸಂಸದರು, ಶಾಸಕರಿಂದ ಹಿಡಿದು ಅಧಿಕಾರಿಗಳವರೆಗೂ ಪ್ರತಿ ಹಂತದಲ್ಲೂ ಗುತ್ತಿಗೆದಾರರಿಂದ 40% ಕಮಿಷನ್ ವಸೂಲಿ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಇರುವವರೆಗೂ ರಾಜ್ಯದ ಅಭಿವೃದ್ಧಿ ಅಸಾಧ್ಯ" ಎಂದಿದೆ.
"ಪ್ರತಿ ಕಾಮಗಾರಿಯಲ್ಲೂ 40% ಕಮಿಷನ್ ಬಿಜೆಪಿಗರ ಜೇಬು ಸೇರುತ್ತಿದೆ, ಹೀಗಿರುವಾಗ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವೇ? ಬಿಜೆಪಿ ಆಡಳಿತದಲ್ಲಿ ಬಿಡಿಎ ಭ್ರಷ್ಟಾಚಾರದ ಕೂಪವಾಗಿರುವುದನ್ನು ಇತ್ತೀಚಿಗೆ ನಡೆದ ಎಸಿಬಿ ದಾಳಿಯಿಂದ ಜಗಜ್ಜಾಹೀರಾಗಿದೆ" ಎಂದು ಹೇಳಿದೆ.
"ಬಡಾವಣೆ ಅಭಿವೃದ್ಧಿಗೆ ಹಣವಿಲ್ಲವೆಂದು ಮೂಲಸೌಕರ್ಯವಿಲ್ಲದ ನಿವೇಶನ ಹರಾಜಿಗೆ ಮುಂದಾಗಿರುವುದು ನಷ್ಟಕ್ಕೆ ದಾರಿ ಮಾಡಿಕೊಡುತ್ತಿದೆ. ನಷ್ಟಕ್ಕೆ ಒಡ್ಡಿಕೊಂಡು ಈ ನಿರ್ದಾರ ಮಾಡಲಾಗಿದೆ ಎಂದರೆ ಇದರಲ್ಲೂ ಅಕ್ರಮ ಅಡಗಿದೆ ಎಂದೇ ಅರ್ಥರಾಜ್ಯದ ಬಿಜೆಪಿ ನಾಯಕರು ಸದಾ ಜಪಿಸುವ 'ಯುಪಿ ಮಾಡೆಲ್'ನಂತೆಯೇ ಕರ್ನಾಟಕದಲ್ಲೂ ತೆಂಗಿನಕಾಯಿಯ ಬದಲು ರಸ್ತೆಯೇ ಒಡೆದುಹೋಗುವ ದುಸ್ಥಿತಿ ಒದಗುವುದು ನಿಶ್ಚಿತ!" ಎಂದು ತಿಳಿಸಿದೆ.
"ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯ ಮೇಲ್ಸೇತುವೆ ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಟೆಂಡರ್ ನಡೆಸದೆ ಹೆಚ್ಚುವರಿ 5 ಕಾಮಗಾರಿಯನ್ನು ಸೇರಿಸಲಾಗಿದೆ. ಸರ್ಕಾರದ ಅನುಮೋದನೆಗೂ ಮೊದಲೇ ಗುತ್ತಿಗೆದಾರ ಕಾಮಗಾರಿ ನಡೆಸುವ ವಿಶ್ವಾಸ ಹೊಂದಿದ್ದಾನೆಂದರೆ ಈ ಸರ್ಕಾರದಲ್ಲಿ 40% ಕಮಿಷನ್ ಎಷ್ಟು ಪ್ರಭಾವಿ ಇರಬಹುದು?" ಎಂದು ಪ್ರಶ್ನಿಸಿದೆ.
"ಈಗಾಗಲೇ ದುಬಾರಿ ವೆಚ್ಚದಲ್ಲಿ ನಿರ್ಮಿಸಿದ ಬೆಂಗಳೂರಿನ ರಸ್ತೆಗಳನ್ನು ಕಾರಿಡಾರ್ಗಳನ್ನಾಗಿಸಲು ಸರ್ಕಾರ ಮುಂದಾಗಿರುವುದು ಅನಗತ್ಯ ದುಂದುವೆಚ್ಚಕ್ಕೆ ದಾರಿ ಮಾಡಿಕೊಡುತ್ತಿದೆ. ಅಗತ್ಯವಿರುವ ಯೋಜನೆಗಳಿಗೆ ಸಂಪನ್ಮೂಲದ ಕೊರತೆಯ ಸಬೂಬು ಹೇಳುವ ಸರ್ಕಾರ ಇಂತಹ ಅನಗತ್ಯ ಯೋಜನೆಗೆ ಕೈ ಹಾಕಿರುವುದು 40% ಕಮಿಷನ್ಗಾಗಿಯೇ?" ಎಂದು ಕೇಳಿದೆ