ಚೆನ್ನೈ, ನ 08 (DaijiworldNews/MS): ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡು ದುರಂತ ಸಂಭವಿಸಿದ್ದು,ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಈ ಘಟನೆ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆಯೂ, " ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಅವರ ಕುಟುಂಬ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ" ಎಂದು ಹೇಳಿದೆ.
ಸೇನಾ ಹೆಲಿಕಾಪ್ಟರ್ ನಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಮತ್ತು ಹವಾಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದರು.
ಸ್ಥಳದಲ್ಲಿ ಎಂಟು ಮೃತದೇಹಗಳು ಪತ್ತೆಯಾಗಿದ್ದು, ನಾಲ್ವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಇಬ್ಬರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಕೆ ರಾಮಚಂದ್ರನ್ ತಿಳಿಸಿದ್ದಾರೆ.