ಬೆಂಗಳೂರು, ನ 08 (DaijiworldNews/MS): ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ " ಇದು ಲಂಚ, ಲಂಚ, ಬರೀ ಲಂಚಕೋರರ ಸರ್ಕಾರ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು," ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಅಧಿಕಾರಿಯ ವರ್ಗಾವಣೆಯೂ ಸಾಧ್ಯವಿಲ್ಲ. ಕಡತಗಳು ಇರುವ ಜಾಗದಿಂದ ಅಲ್ಲಾಡಲ್ಲ, ಅಭಿವೃದ್ಧಿ ಕೆಲಸಗಳು ಮುಂದಕ್ಕೆ ಸಾಗಲ್ಲ. ಇದು ಲಂಚ, ಲಂಚ, ಬರೀ ಲಂಚಕೋರರ ಸರ್ಕಾರ" ಎಂದು ಆರೋಪಿಸಿದರು.
ಬಿಜೆಪಿ ಆಡಳಿತದಲ್ಲಿ ಬಡ ರೈತ ಇನ್ನಷ್ಟು ಬಡವನಾಗುತ್ತಿದ್ದಾನೆ, ಅದಾನಿ, ಅಂಬಾನಿಯಂತವರ ಆಸ್ತಿ ದುಪ್ಪಟ್ಟಾಗುತ್ತಿದೆ. ಬಡವರ ಉಚಿತ ಅಕ್ಕಿಯ ಪ್ರಮಾಣ ಕಡಿಮೆ ಮಾಡುತ್ತಾರೆ, ರೈತರ ಸಾಲ ಮನ್ನಾ ಮಾಡಲ್ಲ, ಉದ್ಯಮಿಗಳ ಸಾಲ ಮನ್ನಾ ಮಾಡಿ, ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡ್ತಾರೆ. ಹಾಗಾದರೆ ಈ ಸರ್ಕಾರ ಯಾರ ಪರವಾಗಿದೆ? ಎಂದು ಪ್ರಶ್ನಿಸಿದರು.
2019ರ ಅತಿವೃಷ್ಟಿಗೆ ಇಲ್ಲಿಯ ವರೆಗೆ ಪರಿಹಾರ ನೀಡಿಲ್ಲ. ನಾನು ಬೆಳಗಾವಿಗೆ ಹೋಗಿದ್ದಾಗ ಮನೆ, ಬೆಳೆ ಕಳೆದುಕೊಂಡಿದ್ದ ನೂರಾರು ಮಹಿಳೆಯರು ಬಂದು ಸರ್ಕಾರದಿಂದ ಪೈಸೆ ಪರಿಹಾರ ಸಿಕ್ಕಿಲ್ಲ, ದಯವಿಟ್ಟು ನೀವೇ ಏನಾದ್ರೂ ಮಾಡಬೇಕು ಎಂದು ಮನವಿ ಮಾಡಿದ್ರು. ಇನ್ನೆಷ್ಟು ವರ್ಷ ಕಳೆದಮೇಲೆ ಅವರಿಗೆ ಸರ್ಕಾರ ಪರಿಹಾರ ಕೊಡೋದು? ಎಂದು ಪ್ರಶ್ನಿಸಿದರು.
ಕೊರೊನಾ ರೋಗಿಗಳಿಗೆ ಸರ್ಕಾರ ಆಸ್ಪತ್ರೆ, ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಲ್ಲ, ಸತ್ತವರಿಗೆ ಪರಿಹಾರ ನೀಡಿಲ್ಲ, ಸತ್ತವರ ಸಂಖ್ಯೆಯಲ್ಲೂ ಸುಳ್ಳು ಹೇಳಿದ್ರು, ಔಷಧಿ, ವೆಂಟಿಲೇಟರ್, ಮಾಸ್ಕ್ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ್ದರು. ಇಂತಹಾ ನಿರ್ಲಜ್ಜ, ಭ್ರಷ್ಟ ಸರ್ಕಾರ ತೊಲಗಿದಾಗಲೆ ಜನರಿಗೆ ನೆಮ್ಮದಿ . ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಕೊರೊನಾ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಹೆಚ್ಚುವರಿ ವೇತನ ಕೊಟ್ಟಿಲ್ಲ, ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೊಟ್ಟಿಲ್ಲ. ಇದೇ ಸರ್ಕಾರ ಮುಂದುವರೆದರೆ ಮುಂದೆ ನೌಕರರಿಗೆ ಸಂಬಳ ಮತ್ತು ಪಿಂಚಣಿ ಕೊಡೋಕು ಹಣವಿರಲ್ಲ ಎಂದು ಹೇಳಿದರು.
ಬಿಜೆಪಿಯವರಿಗೆ ಅಭಿವೃದ್ಧಿ ವಿಚಾರಗಳಿಂದಾಗಲೀ, ಸಾಧನೆಗಳಿಂದಾಗಲೀ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬುದು ಅರಿವಾಗಿದೆ. ಹೀಗಾಗಿ ಮತಗಳನ್ನು ಹಣದ ಮೂಲಕ ಖರೀದಿಸಿ ಚುನಾವಣೆ ತಯಾರಿಯಲ್ಲಿದ್ದಾರೆ. ಈ ಬಗ್ಗೆ ಮತದಾರರು ಜಾಗೃತರಾಗಿ, ವಿವೇಚನೆಯಿಂದ ತಮ್ಮ ಮತ ನೀಡಬೇಕು .ನನ್ನ 5 ವರ್ಷಗಳ ಆಡಳಿತದಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಯಾವ ಮಾನದಂಡವನ್ನು ಉಲ್ಲಂಘಿಸದೆ ಸುಸ್ಥಿರ ಆಡಳಿತ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಬಿಜೆಪಿಯವರು ತಮ್ಮ ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ಬಹಿರಂಗವಾಗಿ ಮಾತನಾಡಲಿ ನೋಡೋಣ ಎಂದು ಸವಾಲೊಡ್ಡಿದರು.
ಸ್ವಯಂ ಪ್ರೇರಿತರಾಗಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಲು ಸಂವಿಧಾನದಲ್ಲಿ ಅವಕಾಶವಿದೆ. ಒಂದು ವೇಳೆ ಬಲವಂತವಾಗಿ ಮತಾಂತರ ನಡೆಯುತ್ತಿದ್ದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮತಾಂತರ ನಿಷೇಧ ಕಾಯ್ದೆ ಬಿಜೆಪಿಯ ಕೋಮು ಧ್ರುವೀಕರಣದ ಅಜೆಂಡಾ ಅಷ್ಟೆ .ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳಿಗೆ ತಮ್ಮ ಸಾಧನೆಯ ಮೂಲಕ ಮತಕೇಳುವ ಧೈರ್ಯ ಇಲ್ಲ. ಇದಕ್ಕಾಗಿ ಜನರ ಮನಸ್ಸಿನಲ್ಲಿ ಕೋಮುವಾದದ ವಿಷತುಂಬಿ ಹಿಂದುತ್ವದ ಮೂಲಕ ಚುನಾವಣೆ ಗೆಲ್ಲುವ ತಮ್ಮ ಹಳೆಯ ಹುನ್ನಾರಕ್ಕೆ ಮತ್ತೆ ಚಾಲನೆ ನೀಡತೊಡಗಿದ್ದಾರೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಪಾಲನೆ ಮಾಡಿದೆ. ಪಕ್ಷದಿಂದ ತಲಾ ಒಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ, ಐದು ಜನ ಹಿಂದುಳಿದ ವರ್ಗದ, ಮಹಿಳಾ ಅಭ್ಯರ್ಥಿ, ಇಬ್ಬರು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ .ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿ ಮೊದಲ ಬಾರಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದರು. ಅದನ್ನು ವಿರೋಧಿಸಿದ್ದು ಬಿಜೆಪಿ ಪಕ್ಷ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯಿಸ್ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿದ್ದರಿಂದ ಇಂದು ಮೀಸಲಾತಿ ಸೌಲಭ್ಯ ಉಳಿದಿದೆ. ಇವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನನಗೆ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಅಥವಾ ಜೆಡಿಎಸ್ ಪಕ್ಷದ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ನಾನು ವಿಷಯಾಧಾರಿತವಾಗಿ, ಸೈದ್ಧಾಂತಿಕವಾಗಿ ಅವರನ್ನು ವಿರೋಧ ಮಾಡಿದ್ದೇನೆ. ನನಗೆ ಜ್ವರವೂ ಇಲ್ಲ, ಜೆಡಿಎಸ್ ಹೆಸರು ಜಪ ಮಾಡಿದ್ರೆ ಜ್ವರ ವಾಸಿಯಾಗೋದು ಇಲ್ಲ. ಆರ್.ಎಸ್.ಎಸ್ ಗೆ ಬೈಯ್ಯುವ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ನಡೆಸಿದ್ದು, ಚುನಾವಣೆಯಲ್ಲಿ ಒಳಒಪ್ಪಂದ ಮಾಡಿಕೊಳ್ಳೋದನ್ನು ವಿರೋಧಿಸಿದ್ದೇನೆ. ಕುಮಾರಸ್ವಾಮಿ ಬಳಿ ಇದಕ್ಕೆ ಸಮರ್ಪಕ ಉತ್ತರ ಇದ್ದರೆ ಕೊಡಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರ ಆರೋಪಗಳಿಗೆ ತಿರುಗೇಟು ನೀಡಿದರು.
ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದೇ ನಮ್ಮ ಸರ್ಕಾರ. ಯೋಜನೆ ಶೀಘ್ರ ಜಾರಿಯಾಗಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ನಡೆಸಲು ತೀರ್ಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ. ಪಾದಯಾತ್ರೆಗೆ ನಾನು ಹೋಗ್ತೇನೆ, ಡಿ.ಕೆ ಶಿವಕುಮಾರ್ ಅವರೂ ಬರ್ತಾರೆ. ರಾಜ್ಯದ ಹಿತಾಸಕ್ತಿಯ ಕಾಳಜಿ ಇದ್ದವರು ಯಾರಾದ್ರೂ ಬರಬಹುದು ಎಂದು ಕರೆನೀಡಿದರು.