ಬೆಂಗಳೂರು, ಡಿ.08 (DaijiworldNews/PY): "ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ತ್ಯಾಗ ಹಾಗೂ ಬಲಿದಾನದ ಅರ್ಥ ತಿಳಿದಿದೆಯೇ? ಬಿಟ್ಟುಕೊಟ್ಟಿದ್ದೆಲ್ಲ ತ್ಯಾಗವಲ್ಲ, ಜೈಲಿಗೆ ಹೋದವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಲ್ಲ" ಎಂದು ಬಿಜೆಪಿ ಟಾಂಗ್ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ತ್ಯಾಗ ಹಾಗೂ ಬಲಿದಾನದ ಅರ್ಥ ತಿಳಿದಿದೆಯೇ? ದೇಶದ ಆಡಳಿತವನ್ನು ಒಂದು ಕುಟುಂಬದ ವಶದಲ್ಲಿ ಇಟ್ಟುಕೊಳ್ಳುವುದಕ್ಕೆ ಮಾಡುವ ತಂತ್ರಗಾರಿಕೆಗಳನ್ನು ತ್ಯಾಗ - ಬಲಿದಾನಕ್ಕೆ ಹೋಲಿಸಲು ಹೇಗೆ ಸಾಧ್ಯ? ನಿಮ್ಮ ಭಾಷಣ ಕೇಳಲು ಬರುವ ಜನ ಮುಗ್ಧರಿರಬಹುದು, ಆದರೆ ದಡ್ಡರಲ್ಲ ಎನ್ನುವುದನ್ನು ತಿಳಿದುಕೊಳ್ಳಿ" ಎಂದಿದೆ.
"ಪ್ರಧಾನಿ ಹುದ್ದೆ ಒಲಿದು ಬಂದರೂ ನಿರಾಕರಿಸುವ ಮೂಲಕ ಸೋನಿಯಾ ಗಾಂಧಿ ತ್ಯಾಗ ಮಾಡಿದರು ಎಂದು ಎಷ್ಟು ಸುಂದರವಾಗಿ ಸುಳ್ಳು ಹೇಳಿ ಬಿಟ್ಟಿರಿ ಡಿಕೆಶಿ ಅವರೇ? ಸೋನಿಯಾ ಗಾಂಧಿ ಅವರು ಆ ಸಂದರ್ಭದಲ್ಲಿ ಹೆಣೆದಿದ್ದು ರಾಜಕೀಯ ಲೆಕ್ಕಾಚಾರ. ಅದನ್ನು ತ್ಯಾಗ-ಬಲಿದಾನ ಎನ್ನಲು ಸಾಧ್ಯವಿಲ್ಲ" ಎಂದು ಹೇಳಿದೆ.
"ಮಾನ್ಯ ಡಿ ಕೆ ಶಿವಕುಮಾರ್ ಅವರೇ, ನಿಮ್ಮ ಭಾಷಣದ ಪ್ರೇರಣೆಯಲ್ಲಿ ಒಂದು ಹೊಸ ಗಾದೆ ರಚಿಸೋಣ. ಬಿಟ್ಟುಕೊಟ್ಟಿದ್ದೆಲ್ಲ ತ್ಯಾಗವಲ್ಲ. ಜೈಲಿಗೆ ಹೋದವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಲ್ಲ" ಎಂದು ಲೇವಡಿ ಮಾಡಿದೆ.