ಚೆನ್ನೈ, ಡಿ.08 (DaijiworldNews/PY): ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಎಂಐ-17 ಸೇನಾ ಹೆಲಿಕಾಪ್ಟರ್ವೊಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರಿನಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 11 ಮಂದಿ ಸಾವನ್ನಪ್ಪಿದ್ಧಾರೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. 11 ಮಂದಿಯ ಮೃತದೇಹ ಪತ್ತೆಯಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದರೂ, ಮೃತರು ಯಾರು, ಗಾಯಗೊಂಡವರು ಯಾರು? ಎನ್ನುವ ಬಗ್ಗೆ ನಿಖರವಾದ ಮಹಿತಿ ದೊರೆತಿಲ್ಲ.
ಮೂಲಗಳ ಪ್ರಕಾರ, ಬಿಪಿನ್ ರಾವತ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಸ್ಥಳೀಯರ ಸಹಾಯದಿಂದ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತರನ್ನು ಹಾಗೂ ಗಾಯಾಳುಗಳನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಹೆಲಿಕಾಫ್ಟರ್ನಲ್ಲಿದ್ದ ಇನ್ನಿತರ ಸಿಬ್ಬಂದಿಗಳು ಸುರಕ್ಷಿತಾಗಿರಲಿ ಎಂದು ಆಶಿಸುತ್ತೇನೆ ಅವರು ಶೀಘ್ರವೇ ಗುಣಮುಖರಾಗಲಿ ಎಂದಿದ್ದಾರೆ.
ಹೆಲಿಕಾಫ್ಟರ್ ಪತನದಿಂದ ಆಘಾತವಾಗಿದೆ. ಗಾಯಾಳುಗಳು ಬೇಗನೇ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಎಂಐ-17 ಸೇನಾ ಹೆಲಿಕಾಪ್ಟರ್ ಸೂಲೂರಿನ ಭಾರತೀಯ ವಾಯುಪಡೆ ನೆಲೆಯಿಂದ ಸೇನಾ ವಿಮಾನ ವೆಲ್ಲಿಂಗ್ಟನ್ನ ರಕ್ಷಣಾ ಸೇವಾ ಕಾಲೇಜು ಕಡೆಗೆ ಹೊರಟಿತ್ತು.