ದಾವಣಗೆರೆ, ಡಿ.08 (DaijiworldNews/PY): "ಪುತ್ರ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಕೇಂದ್ರ ಹೈಕಮಾಂಡ್ ಅಥವಾ ರಾಜ್ಯದ ಬಿಜೆಪಿ ನಾಯಕರನ್ನಾಗಲಿ ತಾವು ಕೇಳಲಿಲ್ಲ" ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ತಾವು ಸಚಿವ ಸಂಪುಟ ವಿಸ್ತರಣೆಯಲ್ಲಿ ಹಸ್ತಕ್ಷೇಪ ಸಲ್ಲಿಸುವುದಿಲ್ಲ. ಇದು ಪಕ್ಷದ ಹೈಕಮಾಂಡ್ ಹಾಗೂ ಕೇಂದ್ರ ನಾಯಕರಿಗೆ ಬಿಟ್ಟ ವಿಚಾರ, ಇಲ್ಲಿ ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ಬೇಡಿಕೆ ಉದ್ಭವಿಸುವುದೇ ಇಲ್ಲ" ಎಂದು ತಿಳಿಸಿದ್ದಾರೆ.
"ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15-20 ಸ್ಥಾನಗಳನ್ನು ಗೆಲ್ಲುತ್ತದೆ. ಮೇಲ್ಮನೆಯಲ್ಲಿ ಬಿಜೆಪಿ ಬೇರೆ ಪಕ್ಷಗಳನ್ನು ಅವಲಂಬಿಸುವುದಿಲ್ಲ" ಎಂದಿದ್ದಾರೆ.
ಲಖನ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಅಭ್ಯರ್ಥಿ ಮಹಂತೇಶ್ ಕವಟಗಿಮಠ ಅವರನ್ನು ಗೆಲ್ಲುವುದೇ ಪಕ್ಷದ ಮುಖ್ಯ ಗಮನವಾಗಿದೆ" ಎಂದು ತಿಳಿಸಿದ್ದಾರೆ.