ಬೆಂಗಳೂರು, ನ 08 (DaijiworldNews/MS): ಕೊವೀಡ್ ಹಾಗೂ ರೂಪಾಂತರಿ ಒಮಿಕ್ರಾನ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಶಾಲಾ - ಕಾಲೇಜುಗಳನ್ನು ಗಮನದಲ್ಲಿಟ್ಟುಕೊಂಡು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಡಿಸೆಂಬರ್ 9 ರಂದು ನಾಳೆ ಮಹತ್ವದ ಸಭೆ ನಡೆಯಲಿದೆ.
ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ತಜ್ಞರು ಒಳಗೊಂಡಿರುವ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿಈಗಾಗಲೇ ಶಾಲೆಗಳ ಕುರಿತು ಹೊರಡಿಸಿರುವ ಮಾರ್ಗಸೂಚಿಯನ್ನು ಬದಲಾದ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಣೆಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇನ್ನು ಈ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯದ 130 ಶಾಲಾ ಮಕ್ಕಳಿಗೆ ಕೊರನಾ ಸೋಂಕು ದೃಢಪಟ್ಟಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರಿಗೆ ಆತಂಕದ ಬೇಡ. ಒಮಿಕ್ರಾನ್ ಅಪಾಯಕಾರಿ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಶಾಲೆ-ಕಾಲೇಜುಗಳನ್ನು ಮುಚ್ಚುವ ಉದ್ದೇಶ ಸರ್ಕಾರಕ್ಕೆ ಇಲ್ಲ . ಮಾರ್ಗಸೂಚಿಯನ್ನು ಬದಲಾದ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಣೆ ಇರಾದೆ ಹೊಂದಿದ್ದೇವೆ ಎಂದರು.