ಬೆಂಗಳೂರು, ಡಿ.07 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂದು ಮೇಲ್ವರ್ಗದವರು ಮುಂದಾಗಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದ್ದು, ಅವರಿಗೆ ಹೇಳಿಕೊಳ್ಳಲು ಒಂದು ಕ್ಷೇತ್ರವಿಲ್ಲ. ಅವರಿಗೆ ಚಾಮುಂಡೇಶ್ವರಿಯಲ್ಲಿ ಸೋಲುವುದು ತಿಳಿದಿದ್ದೇ ಬಾದಾಮಿಗೆ ವಲಸೆ ಹೋದರು. ಈಗ ಅವರು ಅಲ್ಲಿಯೂ ಸೋಲುವುದು ಖಚಿತ" ಎಂದಿದ್ದಾರೆ.
"ತಾನೊಬ್ಬ ಅಹಿಂದ ರಕ್ಷಕನೆಂದು ಹೇಳಿಕೊಂಡು ಸಿದ್ದರಾಮಯ್ಯ ಮೇಲ್ವರ್ಗದವರ ವಿರೋಧಕ್ಕೆ ಗುರಿಯಾಗಿದ್ದಾರೆ. ಈ ಬಾರಿ ಅವರನ್ನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಮತದಾರರು ಗೆಲ್ಲಿಸುವುದಿಲ್ಲ" ಎಂದು ಹೇಳಿದ್ದಾರೆ.
"ಸಿದ್ದರಾಮಯ್ಯ ಅವರು ದಲಿತೋದ್ಧಾರಕ ಎಂದು ಹೇಳಿಕೊಂಡು ಅದೇ ಸಮುದಾಯದ ನಾಯಕರನ್ನು ತುಳಿದು ಸಿಎಂ ಆದರು. ಇದರ ಪರಿಣಾಮ ಇಂದು ಆ ಸಮುದಾಯ ಕೂಡಾ ಕಾಂಗ್ರೆಸ್ನೊಂದಿಗೆ ಇಲ್ಲ" ಎಂದು ಟೀಕಿಸಿದ್ದಾರೆ.
ಬಿಜೆಪಿ, ಜೆಡಿಎಸ್ ವಿಚಾರವಾಗಿ ಮಾತನಾಡಿದ ಅವರು, "ಈ ವಿಚಾರದ ಬಗ್ಗೆ ಈಗಾಗಲೇ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ" ಎಂದಿದ್ದಾರೆ.
"ಜೆಡಿಎಸ್ ಅಭ್ಯರ್ಥಿಗಳು ನಿಲ್ಲದ ಕಡೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಬಿಎಸ್ವೈ ಅವರು ಕೇಳಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನವನ್ನು ಗೆಲ್ಲಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.