ಬೆಂಗಳೂರು, ಡಿ.07 (DaijiworldNews/HR): ಬಿಜೆಪಿ ಜತೆ ಜೆಡಿಎಸ್ ಪಕ್ಷವು ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತೆರೆ ಎಳೆದಿದ್ದು, ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, "ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಲುವಿನ ಬಗ್ಗೆ ಸಾಕಷ್ಟು ಕುತೂಹಲವಿದ್ದು,ಜೆಡಿಎಸ್ 6 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಹಾಗಾಗಿ ಜೆಡಿಎಸ್ ಅಭ್ಯರ್ಥಿ ನಿಲ್ಲದ ಕಡೆಗಳಲ್ಲಿ ಬಿಜೆಪಿಗೆ ಬೆಂಬಲಿಸಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಕೇಳಿದ್ದು,ಬಿಜೆಪಿಯ ಬೇರೆ ಯಾವ ನಾಯಕರೂ ಬೆಂಬಲ ಕೇಳಿಲ್ಲ. ಈ ವಿಚಾರ ಇಷ್ಟಕ್ಕೆ ಮಾತ್ರ ಸೀಮಿತವಾಗಿದೆ" ಎಂದರು.
ಇನ್ನು ಬಿಜೆಪಿ ಜೊತೆ ನಮ್ಮ ಪಕ್ಷದ ಮೈತ್ರಿ ಪ್ರಶ್ನೆಯೇ ಇಲ್ಲ. ನಮ್ಮ ಅಭ್ಯರ್ಥಿಗಳು ನಿಲ್ಲದ ಕಡೆ ಬೆಂಬಲ ನೀಡುವುದು ಬಿಡುವುದು ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ. ಬಿಜೆಪಿ ಜೊತೆ ಯಾವುದೇ ಒಳ ಒಪ್ಪಂದವಾಗಲಿ, ಹೊರ ಒಪ್ಪಂದವಾಗಲಿ ಇಲ್ಲ ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ" ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ನಾವು ಹೋರಾಟ ಮಾಡುತ್ತಿದ್ದು, 2023ರ ವಿಧಾನಸಭಾ ಚುನಾವಣೆ ನಮ್ಮ ಗುರಿ ಎಂದು ಹೇಳಿದ್ದಾರೆ.