ಬೆಂಗಳೂರು, 07 (DaijiworldNews/MS): ಕೋವಿಡ್-19 ಸೋಂಕು ಸಂಖ್ಯೆ 9 ರಾಜ್ಯಗಳ 50 ಜಿಲ್ಲೆಗಳಲ್ಲಿ ಏರುಗತಿಯಲ್ಲಿದ್ದು ಓಮಿಕ್ರಾನ್ ರೂಪಾಂತರಿಯೂ ಪತ್ತೆಯಾಗುತ್ತಿರುವುದರಿಂದ 3 ನೇ ಅಲೆಯ ಆತಂಕ ಮೂಡಿದೆ. ಈ ನಡುವೆ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ರಾಜ್ಯದಲ್ಲಿ ಶೀಘ್ರದಲ್ಲೇ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊವೀಡ್ ಪರೀಕ್ಷಾ ಕೇಂದ್ರಗಳು ಈಗ ಪ್ರತಿ ಜಿಲ್ಲೆಯಲ್ಲಿದೆ. ಆದರೆ, ಜಿನೋಮ್ ಪರಿಣಿತವಾಗಿರುವಂತಹ ವ್ಯವಸ್ಥೆ ಲ್ಯಾಬ್ ಗಳಲ್ಲಿ ಬೇಕು. ಈ ಹಿನ್ನಲೆಯ ಅದಕ್ಕೆ ಬೇಕಾಗಿರುವಂತಹ ಪರಿಣಿತರ ವ್ಯವಸ್ಥೆ ಹಾಗೂ ಉಪಕರಣಗಳ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸ್ ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದಿದ್ದಾರೆ
ಇನ್ನು ಎಲ್ಲ ಸೋಂಕಿತರನ್ನು ಜಿನೋಮ್ ಟೆಸ್ಟ್ ಮಾಡುತ್ತಿಲ್ಲ ಎಂದ ಅವರು ಈಗ ಓಮಿಕ್ರಾನ್ ಬಂದಿದ್ದರಿಂದ ಎಲ್ಲೆಲ್ಲಿ ಸಂಶಯ ಬಂದಿದೆಯೋ ಅಲ್ಲಲ್ಲಿ ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಮಾಡಲಾಗುತ್ತಿದೆ. ಇದಲ್ಲದೆ ಮತ್ತೊಮ್ಮೆ ದೃಢಪಡಿಸಿಕೊಳ್ಳಲು ಎನ್ ಸಿಬಿಎಸ್ ಗೂ ಕಳುಹಿಸುತ್ತಿದ್ದೇವೆ. ಅತಿ ಶೀಘ್ರದಲ್ಲೇ ಟೆಸ್ಟ್ ರಿಪೋರ್ಟ್ ಬರುತ್ತಿವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.