ಸೂರತ್, ಡಿ.07 (DaijiworldNews/HR): ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಮಾಡಿ ಬಳಿಕ ಕೊಲೆಗೈದಿದ್ದ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ವಲಸೆ ಕಾರ್ಮಿಕನಿಗೆ 28 ದಿನಗಳಲ್ಲಿಯೇ ಗುಜರಾತ್ನ ಪೋಕ್ಸೋ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.
ಸಾಂದರ್ಭಿಕ ಚಿತ್ರ
ಆರೋಪಿ ಗುಡ್ಡು ಯಾದವ್ ವಿರುದ್ಧ ಅಪಹರಣ, ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ದಾಖಲಿಸಲಾಗಿದ್ದು, ಪ್ರಕರಣದ ಕುರಿತು ವಾದ, ಪ್ರತಿವಾದ ಆಲಿಸಿದ ಪೋಕ್ಸೋ ವಿಶೇಷ ಕೋರ್ಟ್ ನ್ಯಾಯದೀಶೆ ಪಿ.ಎಸ್.ಕಾಲಾ ಅವರು ಆರೋಪಿ ಯಾದವ್ ದೋಷಿ ಎಂದು ತೀರ್ಪು ನೀಡಿದ್ದರು.
ಇನ್ನು ಬಿಹಾರ ಮೂಲದ ಗುಡ್ಡು ಯಾದವ್ ಗುಜರಾತ್ ನ ಸೂರತ್ ನಗರದ ಪಂಡೇಸರಾ ಪ್ರದೇಶದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ವಾಸವಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತನ್ನ ಕಕ್ಷಿದಾರನಿಗೆ ಮರಣದಂಡನೆ ಶಿಕ್ಷೆ ವಿಧಿಸಬಾರದು ಎಂದು ಯಾದವ್ ಪರ ವಕೀಲ ವಾದ ಮಂಡಿಸಿದ್ದರು.
ಎರಡೂವರೆ ವರ್ಷದ ಹೆಣ್ಣು ಮಗುವನ್ನು ನವೆಂಬರ್ 4ರಂದು ಯಾದವ್ ಅಪಹರಿಸಿದ್ದು, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಉಸಿರುಗಟ್ಟಿಸಿ ಹತ್ಯೆಗೈದಿದ್ದ. ನವೆಂಬರ್ 7ರಂದು ಫ್ಯಾಕ್ಟರಿ ಸಮೀಪ ಮಗುವಿನ ಶವ ಪತ್ತೆಯಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲನೆ, ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ನವೆಂಬರ್ 9ರಂದು ಯಾದವ್ ನನ್ನು ಬಂಧಿಸಿದ್ದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ನ್ಯಾಯಕೊಡಿಸುವ ನಿಟ್ಟಿನಲ್ಲಿ ಪಂಡೇಸರಾ ಪೊಲೀಸರು ಏಳು ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯ ಕೂಡಾ 43 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಯಾದವ್ ಬಂಧನವಾದ 28 ದಿನಗಳಲ್ಲಿಯೇ ದೋಷಿ ಎಂದು ತೀರ್ಪು ನೀಡಿದೆ.