ಬೆಂಗಳೂರು, ಡಿ.07 (DaijiworldNews/PY): ಬಿಜೆಪಿಗೆ ಸೇರಲಿಲ್ಲವೆಂದು ನನ್ನನ್ನು ಜೈಲಿಗೆ ಹಾಕಿಸಿದ್ದರು ಎಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, "ದಾಖಲೆ ಇಲ್ಲದೆ ಮಾತನಾಡುವುದು, ನಂತರ ಮೌನಕ್ಕೆ ಶರಣಾಗುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಈಗ ನೀವು ಅದೇ ಹಾದಿ ತುಳಿಯುತ್ತಿದ್ದೀರಿ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ "ಹಿರಿಯಕ್ಕನ ಚಾಳಿ ಮನೆ ಮಂದಿಗೆ" ಎಂಬ ಮಾತೊಂದಿದೆ. ತಾವ್ಯಾಕೋ ಅದೇ ಹಾದಿಯಲ್ಲಿ ಹೆಜ್ಜೆ ಇಡುವಂತಿದೆ. ದಾಖಲೆ ಇಲ್ಲದೆ ಮಾತನಾಡುವುದು, ನಂತರ ಮೌನಕ್ಕೆ ಶರಣಾಗುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಈಗ ನೀವು ಅದೇ ಹಾದಿ ತುಳಿಯುತ್ತಿದ್ದೀರಿ ಎಂದು ಹೇಳಿದೆ.
"ಬಿಜೆಪಿ ಸೇರದೇ ಇರುವ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದರು. ಇದಕ್ಕಾಗಿ ನನ್ನ ಬಳಿ ದಾಖಲೆ ಇದೆ ಎಂದು ಡಿ ಕೆ ಶಿವಕಮಾರ್ ಹೇಳಿದ್ದಾರೆ. ದಾಖಲೆ ಇದ್ದರೆ ಬಿಡುಗಡೆಗೊಳಿಸಿ. ಅದನ್ನು ಬಿಟ್ಟು ಇಷ್ಟು ದಿನ ಏಕೆ ಕಾಯುತ್ತಾ ಕುಳಿತಿರಿ? ಬುರುಡೆರಾಮಯ್ಯ ರೀತಿ ನೀವೂ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ನಡೆಸುತ್ತಿದ್ದೀರಾ? ಎಂದು ಪ್ರಶ್ನಿಸಿದೆ.
"ಡಿ ಕೆ ಶಿವಕುಮಾರ್ ಅವರೇ, ಮತ್ತೊಮ್ಮೆ ಹೇಳುತ್ತಿದ್ದೇವೆ., ತೆರಿಗೆ ವಂಚಿಸಿ ಅಕ್ರಮ ಆಸ್ತಿ ಸಂಗ್ರಹಿಸಿದ್ದೀರಿ ಎಂಬ ಒಂದೇ ಕಾರಣಕ್ಕೆ ಕೇಂದ್ರ ತೆರಿಗೆ ಸಂಸ್ಥೆಗಳು ನಿಮ್ಮನ್ನು ತಿಹಾರ್ ಜೈಲಿಗೆ ಕಳುಹಿಸಿದ್ದವು. ಬೇರೆ ಯಾವ ಕಾರಣವೂ ಇಲ್ಲ" ಎಂದಿದೆ.
"ಬಿಜೆಪಿಗೆ ಸೇರಲಿಲ್ಲ ಎಂದು ನನ್ನನ್ನು ತಿಹಾರಿ ಜೈಲಿಗೆ ಕಳಿಸಿದ್ದರು" ಎಂದು ಸೋಮವಾರ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದರು.