ಕಲಬುರಗಿ, ಡಿ.07 (DaijiworldNews/PY): "ಚುನಾವಣೆ ಬಂದಾಗಲೆಲ್ಲಾ ಬಿಜೆಪಿಗೆ ಪಂಚಾಯತ್ ಸದಸ್ಯರ ಬಗ್ಗೆ ಪ್ರೀತಿ ಉಕ್ಕಿ ಬರುತ್ತದೆ" ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಜೆಪಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಪಂಚಾಯತ್ ವ್ಯವಸ್ಥೆಯಲ್ಲಿ ದಿ.ರಾಜೀವ್ ಗಾಂಧಿ ಅವರು ಮೀಸಲಾತಿ ಜಾರಿಗೆ ತಂದರು. ಆದರೆ, ಬಿಜೆಪಿ ಸಂವಿಧಾನದಲ್ಲಿ ಮೀಸಲಾತಿ ತಿದ್ದುಪಡಿ ಪ್ರಶ್ನಿಸಿ ಕೋರ್ಟ್ ಮೋರೆ ಹೋಗಿತ್ತು. ಬಿಜೆಪಿ ಬಂದ ಬಳಿಕ ಪಂಚಾಯತ್ ರಾಜ್ಯ ವ್ಯವಸ್ಥೆ ಬಿಜೆಪಿಯಿಂದ ಕೈತಪ್ಪಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಆರ್ಥಿಕವಾಗಿ ಪಂಚಾಯತ್ ವ್ಯವಸ್ಥೆಯನ್ನು ಬಲಹೀನ ಮಾಡಲಾಗುತ್ತಿದೆ. 15ನೇ ಹಣಕಾಸು ವ್ಯವಸ್ಥೆಯಲ್ಲಿ ಜನರ ಕನಸು ನನಸಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಹಳ್ಳ ಹಿಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಕೊರೊನಾ ವೇಳೆ ಜೀವನ ಕಳೆದುಕೊಂಡ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಶ್ರೀರಕ್ಷೆಯಾಗಿತ್ತು" ಎಂದು ಹೇಳಿದ್ದಾರೆ.
"ಸರ್ಕಾರದ ಸಾಧನೆ ಕೇವಲ ಪತ್ರಿಕೆಗಳಲ್ಲಿ ಮಾತ್ರ. ಈವರೆಗೆ ಜಿಲ್ಲೆಗೆ ಒಂದು ಉಸ್ತುವಾರಿ ಸಚಿವ ಸ್ಥಾನ ಸರ್ಕಾರ ನೀಡಿಲ್ಲ. ಬಿಜೆಪಿ ಏನೇ ಕುತಂತ್ರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಖಚಿತ. ನಮ್ಮ ಅಭ್ಯರ್ಥಿ ಪಂಚಾಯತ್ ರಾಜ್ ವ್ಯವಸ್ಥೆಯಿಂದ ಬಂದವರು. ಬಿಜೆಪಿ ಅಭ್ಯರ್ಥಿ ವ್ಯಾಪಾರದ ಹಿನ್ನೆಲೆಯಿಂದ ಬಂದವರು. ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಅರಿವಿಲ್ಲ" ಎಂದು ಆರೋಪಿಸಿದ್ದಾರೆ.