ಸವಾಯಿ , ನ 07 (DaijiworldNews/MS): ಬಾಲಿವುಡ್ ಅಂಗಳದಲ್ಲಿ ವಿಕ್ಕಿ ಕೌಶಲ್ - ಕತ್ರಿನಾ ಕೈಫ್ ಅವರ ಮದುವೆಯದ್ದೇ ಸುದ್ದಿ. ಬಹು ಚರ್ಚಿತ ಈ ಮದುವೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಡೆಯಲಿದೆ. ಡಿಸೆಂಬರ್ 7 ರಿಂದ ಡಿಸೆಂಬರ್ 9 ರವರೆಗೆ ಸಮಾರಂಭ ನಡೆಯಲಿದ್ದು ಈಗಾಗಲೇ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆಗೆ ಸವಾಯಿ ಮಾಧೋಪುರ್ ತಲುಪಿದ್ದಾರೆ.
ಈ ನಡುವೆ ಮದುವೆಗೆ ತೆರಳುವ ಅತಿಥಿಗಳ ಅನುಕೂಲಕ್ಕಾಗಿ ಮತ್ತು ಮದುವೆಗೆ ಆಹ್ವಾನಿತರಲ್ಲದವರ ಪ್ರವೇಶವನ್ನು ತಡೆಹಿಡಿಯಲೆಂದು ರಾಜಸ್ಥಾನದ ಗ್ರಾಮವೊಂದರಲ್ಲಿ ರಸ್ತೆಯನ್ನೇ ಬಂದ್ ಮಾಡಲಾಗಿದೆ. ಮದುವೆಗಾಗಿ ಬರುವ ಅತಿಥಿಗಳು ತಂಗುವ ಹೋಟೆಲ್ ಸಿಕ್ಸ್ ಸೆನ್ಸಸ್ ಸಮೀಪದ ಚೌತ್ ಮಠದ ಸಮೀಪದ ರಸ್ತೆಯನ್ನು ಮದುವೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮ್ಯಾನೇಜರ್ ಬಂದ್ ಮಾಡಿಸಿದ್ದಾರೆ. ಅಲ್ಲದೆ, ಅದಕ್ಕಾಗಿ ಹೋಟೆಲ್ ಮ್ಯಾನೇಜರ್ ಮತ್ತು ಮದುವೆಯ ಈವೆಂಟ್ ಮ್ಯಾನೇಜರ್ ಅಲ್ಲಿನ ಜಿಲ್ಲಾಧಿಕಾರಿಯ ಸಹಕಾರವನ್ನೂ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ನ್ಯಾಯವಾದಿ ನೇತ್ರವಿಂದ್ ಸಿಂಗ್ ಜಾದೂನ್ ಎಂಬವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. "ಕಾರ್ಯಕ್ರಮಕ್ಕೆ ತಮ್ಮ ಅಭ್ಯಂತರವಿಲ್ಲ . ಆದರೆ ಚೌತ್ ಕಾ ಬರ್ವಾರಾದಲ್ಲಿ ಶತಮಾನಗಳಷ್ಟು ಹಳೆಯದಾದ ಚೌತ್ ಮಾತೆಯ ಐತಿಹಾಸಿಕ ದೇವಾಲಯವಿದೆ. ಪ್ರತಿದಿನ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹೋಟೆಲ್ ಸಿಕ್ಸ್ ಸೆನ್ಸ್ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿದೆ. ಹೋಟೆಲ್ ವ್ಯವಸ್ಥಾಪಕರು ರಸ್ತೆಯನ್ನು ಮುಚ್ಚಿದ್ದಾರೆ. ಮುಂದಿನ ಆರು ದಿನಗಳ ಕಾಲ ಹೊಟೇಲ್ ಸಿಕ್ಸ್ ಸೆನ್ಸ್ ನಿಂದ ಮುಖ್ಯರಸ್ತೆ ದೇವಸ್ಥಾನವನ್ನು ಸಂಪೂರ್ಣವಾಗಿ ಮುಚ್ಚಲಾಗುವುದು, ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ಮತ್ತು ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಹೋಟೆಲ್ ಸಿಕ್ಸ್ ಸೆನ್ಸ್ ಮುಂಭಾಗದಿಂದ ಚೌತ್ ಮಾತಾ ದೇವಸ್ಥಾನಕ್ಕೆ ದಾರಿ ತೆರೆಯಬೇಕು" ಎಂದು ಜಾದೌನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.