ಲಕ್ನೊ, ಡಿ.07 (DaijiworldNews/HR): 10 ನೇ ತರಗತಿಯ ಬಾಲಕಿಯರನ್ನು ಸಿಬಿಎಸ್ಇ ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿಪುರ್ಕಾಜಿ ಪ್ರದೇಶದ ಖಾಸಗಿ ಶಾಲೆಯ ಶಿಕ್ಷಕರು ಹಾಗೂ ಶಾಲೆಯ ಮಾಲೀಕರು ಶಾಲೆಗೆ ಕರೆಸಿ, ರಾತ್ರಿ ಉಳಿಯುವಂತೆ ಹೇಳಿ ಅಲ್ಲಿ ಅವರಿಗೆ ನಿದ್ದೆ ಬರುವ ಆಹಾರವನ್ನು ನೀಡಿ ಕಿರುಕುಳ ನೀಡಿರುವ ಉತ್ತರ ಪ್ರದೇಶದ ಮುಝಾಫರ್ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಾಲಕಿಯರೆಲ್ಲರೂ ಮರುದಿನ ಶಾಲೆಯಿಂದ ತಮ್ಮ ಮನೆಗೆ ಮರಳಿದ್ದು, ಶಾಲೆಯಲ್ಲಿ ನಡೇದ ಘಟನೆಯನ್ನು ಯಾರಿಗಾದರೂ ಹೇಳಿದರೆ ನಿಮ್ಮ ಕುಟುಂಬ ಸದಸ್ಯರನ್ನು ಕೊಲ್ಲಲಾಗುವುದು ಎಂದು ಬಾಲಕಿಯರಿಗೆ ಬೆದರಿಕೆ ಹಾಕಲಾಗಿದೆ ಎನ್ನಲಾಹಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಲಾಗಿದೆ.
ಇನ್ನು ಇಬ್ಬರು ಸಂತ್ರಸ್ತ ಬಾಲಕಿಯರ ಪೋಷಕರು ಪುರ್ಕಾಝಿ ಶಾಸಕ ಪ್ರಮೋದ್ ಉತ್ವಾಲ್ ಅವರನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅವರು ತನಿಖೆಯನ್ನು ಆರಂಭಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಯಾದವ್ ಅವರನ್ನು ಸಂಪರ್ಕಿಸಿದ್ದಾರೆ.
ಹುಡುಗಿಯರು ಓದುವ ಶಾಲೆಯ ಮಾಲಿಕರು ಹಾಗೂ ಘಟನೆಯ ರಾತ್ರಿ ಅವರನ್ನು ಪ್ರಾಯೋಗಿಕ ಪರೀಕ್ಷೆಗೆ ಕರೆದೊಯ್ದ ಇನ್ನೊಬ್ಬನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಶಾಲೆಯ ಮಾಲಿಕನನ್ನು ಬಂಧಿಸಲಾಗಿದೆ.