ಅಲಹಾಬಾದ್, ನ 07 (DaijiworldNews/MS): ಒಂದು ಕುಟುಂಬದಲ್ಲಿ ಮಗಳಿಗಿಂತ ಸೊಸೆಗೆ ಹೆಚ್ಚಿನ ಹಕ್ಕುಗಳಿವೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶ ಅಗತ್ಯ ಸರಕುಗಳ (ಉತ್ಪಾದನೆ, ವಿತರಣೆ ಮತ್ತು ಬೆಲೆ ನಿರ್ಧಾರ) ಕಾಯ್ದೆ, 2016 ರಲ್ಲಿ 'ಮನೆಗೆ ಬರುವ ಸೊಸೆಯನ್ನು ಕುಟುಂಬದ ಸದಸ್ಯೆ' ಎಂದು ಹೆಸರಿಸಲಾಗಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಹೊಸ ವ್ಯವಸ್ಥೆಯನ್ನು ಮಾಡುವ ಅಲಹಾಬಾದ್ ಹೈಕೋರ್ಟ್ ಸೊಸೆಯನ್ನು ಕುಟುಂಬ ವರ್ಗದಲ್ಲಿ ಇರಿಸಲು ಆದೇಶಿಸಿದೆ. ಸೊಸೆಯ ಹಕ್ಕುಗಳಿಂದ ವಂಚಿತರಾಗುವಂತಿಲ್ಲ. ಕುಟುಂಬದಲ್ಲಿ ಮಗಳಿಗಿಂತ ಸೊಸೆಗೆ ಹೆಚ್ಚಿನ ಹಕ್ಕುಗಳಿವೆ ಎಂದು ಅಭಿಪ್ರಾಯಪಟ್ಟಿದೆ.
ಮನೆಗೆ ಬಂದ ಸೊಸೆ ವಿಧವೆ ಅಥವಾ ವಿಧವೆಯಲ್ಲದಿದ್ದರೂ, ಮಗಳಿಗಿಂತ (ವಿಚ್ಛೇದಿತ ಅಥವಾ ವಿಧವೆ) ಹೆಚ್ಚಿನ ಕುಟುಂಬ ಹಕ್ಕುಗಳನ್ನು ಹೊಂದಿದ್ದಾಳೆ ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರರಾದ ಪುಷ್ಪಾ ದೇವಿ ಅವರು ವಿಧವೆಯಾಗಿದ್ದು, ಅತ್ತೆ ಮಹದೇವಿ ದೇವಿ ಅವರ ಹೆಸರಿನಲ್ಲಿ ಪಡಿತರ ಅಂಗಡಿ ಮಂಜೂರು ಮಾಡಲಾಗಿತ್ತು. ಆದರೆ ಅತ್ತೆ 11 ಏಪ್ರಿಲ್ 2021 ರಂದು ನಿಧನರಾದರು. ಹೀಗಾಗಿ ಮತ್ತೆ ಜೀವನೋಪಾಯಕ್ಕಾಗಿ ಬಿಕ್ಕಟ್ಟನ್ನು ಸೃಷ್ಟಿಯಾಗಿತ್ತು. ಪುಷ್ಪಾ ದೇವಿ ಮತ್ತು ಅವರ ಇಬ್ಬರೂ ಮಕ್ಕಳು ಸಂಪೂರ್ಣವಾಗಿ ಅತ್ತೆಯ ಮೇಲೆ ಅವಲಂಬಿತರಾಗಿದ್ದರು.
ಅತ್ತೆಯ ಮರಣದ ನಂತರ, ಅವರ ಕುಟುಂಬದಲ್ಲಿ ವಾರೀಸುದಾರ ಪುರುಷ ಮತ್ತು ಮಹಿಳೆ ಉಳಿದಿರಲಿಲ್ಲ .ಪಡಿತರ ಅಂಗಡಿ ಮಂಜೂರಾತಿಗೆ ಸಂಬಂಧಿಸಿದಂತೆ ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಆಗಸ್ಟ್ 5, 2019 ರ ಉತ್ತರ ಪ್ರದೇಶ ಸರ್ಕಾರದ ಆದೇಶದ ಅಡಿಯಲ್ಲಿ ಸೊಸೆ ಅಥವಾ ವಿಧವೆ ಸೊಸೆಯನ್ನು ಕುಟುಂಬ ವರ್ಗದಲ್ಲಿ ಇರಿಸಲಾಗಿಲ್ಲ ಎಂದು ಪ್ರಾಧಿಕಾರವು ಅವರ ಅರ್ಜಿಯನ್ನು ತಿರಸ್ಕರಿಸಿತು. ಈ ಆದೇಶದ ವಿರುದ್ಧ ಪುಷ್ಪಾ ದೇವಿ ಅರ್ಜಿದಾರರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.