ಮುಂಬೈ, ಡಿ.07 (DaijiworldNews/PY): ಬಾಲಕನೋರ್ವ ತಾಯಿಯ ಸಹಾಯದಿಂದ 19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿ ನಡೆದಿದೆ.
ಅಕ್ಕನ ಕತ್ತರಿಸಿದ ತಲೆಯ ಜೊತೆಗೆ ತಾಯಿ ಹಾಗೂ ಮಗ ಸೆಲ್ಫಿ ಕ್ಲಿಕ್ಕಿಸಿ ಅದನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿರುವುದಾಗಿ ವರದಿಯಾಗಿದೆ.
ಕೊಲೆಯಾಗುವ ಸಂದರ್ಭ ಆಕೆಯ ಪತಿಯೂ ಸಹ ಮನೆಯಲ್ಲೇ ಇದ್ದ. ಅಕ್ಕನ ಗಂಡನ ಮೇಲೂ ಸಹ ದಾಳಿ ಮಾಡಲು ಬಾಮೈದ ಮುಂದಾಗಿದ್ದಾನೆ. ಆದರೆ, ಆತ ಇದರಿಂದ ತಪ್ಪಿಸಿಕೊಂಡಿದ್ದಾನೆ.
ಗರ್ಭಿಣಿಯಾಗಿದ್ದ ಸಹೋದರಿಯ ತಲೆಯನ್ನು ಕುಡುಗೋಲಿನಿಂದ ಕತ್ತರಿಸಿದ ಬಳಿಕ ಮನೆಯ ವರಾಂಡದ ಮುಂದೆ ನಿಂತು ತಲೆಯನ್ನು ಎಸೆದು ನೆರೆಮನೆಯವರಿಗೆ ಪ್ರದರ್ಶಿಸಿದ್ದಾನೆ. ಇದಾದ ನಂತರ ಆರೋಪಿಗಳು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಘಟನೆಯ ಹಿನ್ನೆಲೆ:
ಕಳೆದ ಜೂನ್ನಲ್ಲಿ ಕೀರ್ತಿ ಥೋರ್ ಎಂಬಾಕೆ ಓಡಿ ಹೋಗಿ ವಿವಾಹವಾಗಿದ್ದು, ಪತಿಯ ಜೊತೆ ವಾಸವಿದ್ದಳು. ಆಕೆಯ ತಾಯಿ ಕಳೆದ ವಾರವಷ್ಟೇ ಆಕೆಯನ್ನು ಸಂಪರ್ಕಿಸಿದ್ದರು. ತಾಯಿಯನ್ನು ಮನೆಗೆ ಬರುವಂತೆ ಕೀರ್ತಿ ಆಹ್ವಾನ ನೀಡಿದ್ದರು. ಅದರೆಂತೆ ಮಗ ಹಾಗೂ ತಾಯಿ ಕೀರ್ತಿಯ ಮನೆಗೆ ಬಂದಿದ್ದಾರೆ. ಈ ಸಂದರ್ಭ ಕೀರ್ತಿಯ ಗಂಡ ಬೇರೆ ಕೋಣೆಯಲ್ಲಿದ್ದ. ಇತ್ತ ಕೀರ್ತಿ ತಾಯಿ ಹಾಗೂ ತಮ್ಮನಿಗೆ ಟೀ ಮಾಡುತ್ತಿದ್ದಳು. ಇದೇ ವೇಳೆ ಹಿಂದಿನಿಂದ ಬಂದ ತಾಯಿ ಹಾಗೂ ಮಗ ಕೀರ್ತಿ ಮೇಲೆ ದಾಳಿ ಮಾಡಿದ್ದಾರೆ.
ತಾಯಿ ಕೀರ್ತಿಯ ಕಾಲನ್ನು ಹಿಡಿದುಕೊಂಡಿದ್ದು, ಮೊದಲೇ ಸಂಚು ರೂಪಿಸಿ ಕುಡುಗೋಲು ತಂದಿದ್ದ ತಮ್ಮ, ಅಕ್ಕನ ಕುತ್ತಿಗೆಯನ್ನು ತುಂಡರಿಸಿದ್ದಾನೆ. ನಂತರ ಆಕೆಯ ತಲೆಯನ್ನು ಹೊರಗೆ ತಂದು ನೆರೆಮನೆಯವರ ಮುಂದೆ ಪ್ರದರ್ಶಿಸಿದ್ದು, ಬಿಕ ಇಬ್ಬರೂ ವಿರಂಗಾವ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.