ಬೆಂಗಳೂರು, ಡಿ.07 (DaijiworldNews/HR): ಪ್ರಸ್ತುತ ಸಾಮಾನ್ಯ ಜನರಿಗೂ ಸಾಧ್ಯವಾಗುವ ದರದಲ್ಲಿ ದೂರವಾಣಿ ಸೇವೆ ಲಭ್ಯವಾಗುತ್ತಿರುವಾಗ ಜನಪ್ರತಿನಿಧಿಗಳು ಮಾತ್ರ ಸರ್ಕಾರದಿಂದ ದುಬಾರಿ ಭತ್ಯೆ ಯಾಕೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಸಾಂದರ್ಭಿಕ ಚಿತ್ರ
ಸರ್ಕಾರದಿಂದ ಪ್ರತಿ ಶಾಸಕರು ಮಾಸಿಕ 20 ಸಾವಿರ ರೂ. ದೂರವಾಣಿ ಭತ್ಯೆ ಪಡೆದುಕೊಳ್ಳುತ್ತಿದ್ದು, ಒಂದು ವರ್ಷಕ್ಕೆ 2.40 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದು, ಒಟ್ಟು 225 ಶಾಸಕರು, 75 ವಿಧಾನಪರಿಷತ್ ಸದಸ್ಯರಿಗೆ ಮಾಸಿಕ 60 ಲಕ್ಷ ರೂಪಾಯಿ ಸರ್ಕಾರದ ಬೊಕ್ಕಸದಿಂದ ವೆಚ್ಚವಾಗುತ್ತಿದ್ದು, ವರ್ಷಕ್ಕೆ 7.20ಕೋಟಿ ರೂಪಾಯಿಯನ್ನು ಸರ್ಕಾರವು ಅವರಿಗಾಗಿ ಖರ್ಚು ಮಾಡುತ್ತಿದೆ. ಪಾವತಿ ಮಾಡಲಾಗುತ್ತದೆ.
ಇನ್ನು ಸರ್ಕಾರದಿಂದ ಶಾಸನ ಸಭೆಯ ಸದಸ್ಯರಿಗೆ ತಿಂಗಳಿಗೆ 25,000 ವೇತನ, ದೂರವಾಣಿ ವೆಚ್ಚ 20,000 ರೂ., ಕ್ಷೇತ್ರ ಭತ್ಯೆ 40,000 ರೂ., ಪೋಸ್ಟಲ್ ಚಾರ್ಜ್ 5,000 ರೂ., ಆಪ್ತ ಸಿಬ್ಬಂದಿ ವೇತನ 10 ಸಾವಿರ ರೂ ಸೇರಿದಂತೆ ಒಟ್ಟು ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ.
ಇಷ್ಟೆ ಅಲ್ಲದೆ ಅವರ ಕ್ಷೇತ್ರದಲ್ಲಿನ ಸಂಚಾರಕ್ಕಾಗಿ ತಿಂಗಳಿಗೆ 40,000 ರೂ. ಹಾಗೂ ಸಭೆ ಭತ್ಯೆ ದಿನಕ್ಕೆ 2,000 ರೂ., ಹೊರರಾಜ್ಯದ ಪ್ರವೇಶಕ್ಕಾಗಿ 2,500 ದಿನಭತ್ಯೆ ಮತ್ತು ಐದು ಸಾವಿರ ರೂಪಾಯಿ ಬೋರ್ಡಿಂಗ್ ವೆಚ್ಚ ಕೂಡ ನೀಡಲಾಗುತ್ತ್ದೆ.
ಇನ್ನು ವರ್ಷಕ್ಕೆ ವಿಮಾನಯಾನ ಹಾಗೂ ರೈಲ್ವೆ ಸಂಚರಕ್ಕಾಗಿ 2 ಲಕ್ಷ ರೂ. ನೀಡಲಾಗುತ್ತಿದ್ದು, ಜೊತೆಗೆ ವಾಹನ ಖರೀದಿಗಾಗಿ ಶೇ.7 ವಾರ್ಷಿಕ ಬಡ್ಡಿದರದಲ್ಲಿ 15 ಲಕ್ಷ ರೂಪಾಯಿ ಸಾಲವನ್ನು ಸರ್ಕಾರ ನೀಡಲಿದೆ .
ಸರ್ಕಾರವು ಶಾಸಕರಿಗಾಗಿ ಇಷ್ಟೆಲ್ಲ ಖರ್ಚು ಮಾಡುವ ಬದಲು ಜನಸಾಮಾನ್ಯರಿಗೆ ಬೇಕಾದ ಪರಿಹಾರ ಹಾಗೂ ಅಭಿವೃದ್ದಿ ಕೆಲಸಗಳಿಗೆ ಖರ್ಚು ಮಾಡಲಿ ಎಂಬುದು ಸಾರ್ವಕನಿಕರ ಕೋರಿಕೆ.