ಬೆಂಗಳೂರು, ಡಿ.06 (DaijiworldNews/PY): "ಚುನಾವಣಾ ಪ್ರಚಾರ ಸಭೆಗಳಲ್ಲಿ ನಿರಂತರ ಸುಳ್ಳು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಪಕ್ಷದ ಮೂಲ ತತ್ವವನ್ನು ಎತ್ತಿಹಿಡಿದಿದ್ದಾರೆ. ನೂರು ಬಾರಿ ಸುಳ್ಳು ಹೇಳಿ ಅದನ್ನೆ ಸತ್ಯವೆಂದು ನಂಬಿಸುವುದು ಬಿಜೆಪಿಯವರ ಹುಟ್ಟುಗುಣವಲ್ಲವೇ?" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಕಾಳಜಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ತೋರಿಸುತ್ತಾರೆ ಎನ್ನುವ ನಿರೀಕ್ಷೆ ನನ್ನಲ್ಲಿ ಇತ್ತು. ಆ ನಿರೀಕ್ಷೆಗಳೆಲ್ಲ ಈಗ ಹುಸಿಯಾಗಿದೆ" ಎಂದಿದ್ದಾರೆ.
"ನಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾದ ಮನೆಗಳ ಬಗ್ಗೆ ಆಗಾಗ್ಗೆ ಪ್ರಶ್ನೆ ಕೇಳುವ, ಸುಳ್ಳು ಹೇಳುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗಿದ್ದೂ ಮಾಹಿತಿ ತರಿಸಿಕೊಳ್ಳಲು ಕಷ್ಟವಾಗುತ್ತಿದೆಯೇ ಅಥವಾ ಮುಖ್ಯಮಂತ್ರಿಗಳು ಕೇಳಿದರೂ ಇಲಾಖೆಗಳೇ ಮಾಹಿತಿ ನೀಡುತ್ತಿಲ್ಲವೇ?" ಎಂದು ಕೇಳಿದ್ದಾರೆ.
"2013 ರಿಂದ 2018 ರ ಮಾರ್ಚ್ ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ರೂ. 16,775 ಕೋಟಿ ವೆಚ್ಚದಲ್ಲಿ 15 ಲಕ್ಷ ಮನೆಗಳನ್ನು ವಸತಿ ರಹಿತರಿಗಾಗಿ ನಿರ್ಮಾಣ ಮಾಡಿಕೊಟ್ಟಿದ್ದೆವು. ಈ ಮಾಹಿತಿಯನ್ನು ವಸತಿ ಸಚಿವ ಸೋಮಣ್ಣನವರ ಕಛೇರಿಯಿಂದಲೆ ನನಗೆ ಲಿಖಿತವಾಗಿ ಕಳಿಸಿದ್ದಾರೆ. ನಿಮಗೊಂದು ಪ್ರತಿ ತರಿಸಿ ಕೊಡಲೇ ಬಸವರಾಜ ಬೊಮ್ಮಾಯಿ ಅವರೇ?" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಒಳಗೊಂಡಂತೆ 32 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಸರ್ಕಾರದ ಸಾಧನೆ ಇನ್ನೂ ಸೊನ್ನೆಯಲ್ಲೇ ಭದ್ರವಾಗಿ ಕೂತಿದೆ ಅಲ್ಲವೇ?" ಎಂದು ಕೇಳಿದ್ದಾರೆ.
"ನಾನು ಮುಖ್ಯ ಮಂತ್ರಿಯಾಗಿದ್ದಾಗ ಗ್ರಾಮ ವಿಕಾಸ ಮತ್ತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಜಾರಿಗೆ ತಂದು, ಈ ಯೋಜನೆಗಳಡಿ 1750 ಕೋಟಿ ರೂಪಾಯಿಗಳನ್ನು ನೀಡಿ 2000 ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದ್ದೆ. ಇಂತಹ ಜನಪರ ಯೋಜನೆ ನಿಲ್ಲಿಸಿದ್ದು ನಿಮ್ಮದೇ ಸರ್ಕಾರ ಅಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಅಮೃತ ಯೋಜನೆಯಡಿ ಆಯ್ದ ಗ್ರಾಮಗಳಿಗೆ ಕೇವಲ 25 ಲಕ್ಷ ರೂಪಾಯಿ ನೀಡುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳುತ್ತಾರೆ. 25 ಲಕ್ಷ ರೂಪಾಯಿಗಳಲ್ಲಿ 40% ನಿಮ್ಮ ಸರ್ಕಾರದ ಸಚಿವರು, ಅಧಿಕಾರಿಗಳಿಗೆ ಕಮಿಷನ್ ಹೋದರೆ ಗ್ರಾಮಗಳ ಅಭಿವೃದ್ಧಿಗೆ ಉಳಿಯುವ ಹಣ ಎಷ್ಟು ಬೊಮ್ಮಾಯಿ ಅವರೇ?" ಎಂದು ಪ್ರಶ್ನಿಸಿದ್ದಾರೆ.
"ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮೀಣ ರಸ್ತೆಗಳಿಗೆಂದು 1350 ಕೋಟಿ ನೀಡುವುದಾಗಿ ಆದೇಶ ಹೊರಡಿಸಿದ್ದರು. ಆದರೆ ಇದುವರೆಗೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಬರಿ ಘೋಷಣೆಗಳಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವೇ ಬಸವರಾಜ ಬೊಮ್ಮಾಯಿ ಅವರೇ? ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮ ಪಂಚಾಯತಿ ನೌಕರರಿಗೆ ಸಂಬಳ ನೀಡಲೆಂದು ಪ್ರತಿ ವರ್ಷ 912 ಕೋಟಿ ರೂ.ಗಳನ್ನು ತೆಗೆದಿಡುತ್ತಿದ್ದೆವು. ಅದರಿಂದ ಸಾವಿರಾರು ನೌಕರರಿಗೆ ಅನುಕೂಲವಾಗಿತ್ತು. ನಮ್ಮದು ಬಿಜೆಪಿ ಸರ್ಕಾರದಂತೆ ಬರೀ ಘೋಷಣೆಯಾಗಿ ಉಳಿದಿಲ್ಲ, ಸಾಧನೆಗಳಾಗಿವೆ" ಎಂದು ತಿಳಿಸಿದ್ದಾರೆ.
"ಗ್ರಾಮ ಪಂಚಾಯತಿಗಳಿಗೆ ಅನುದಾನ ಬರಲು ಆರಂಭವಾಗಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರು ನರೇಗಾ ಯೋಜನೆ ಪ್ರಾರಂಭಿಸಿದ ಮೇಲೆ. ನರೇಗಾ ಯೋಜನೆಯನ್ನು ಗುಜರಾತಿನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ವಿರೋಧಿಸಿದ್ದರು ಎಂಬ ಸತ್ಯವನ್ನು ಬಿಜೆಪಿ ನಾಯಕರು ಮರೆಯಬಾರದು" ಎಂದಿದ್ದಾರೆ.
"ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಜನ ಬಿಪಿಎಲ್ ಕಾರ್ಡುದಾರರಿದ್ದಾರೆ. ಅದರಲ್ಲಿ 1 ಕೋಟಿ ಜನರಿಗೆ 100 ಮಾನವ ದಿನಗಳಷ್ಟು ಕೆಲಸ ಕೊಟ್ಟರೆ 100 ಕೋಟಿ ಮಾನವ ದಿನಗಳ ಗುರಿ ನೀಡಬೇಕಾಗುತ್ತದೆ. ಆದರೆ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಗುರಿಯನ್ನು ನೀಡಲಾಗುತ್ತಿದೆ. ಈಗಿರುವ ಗುರಿ ಕೇವಲ 13 ಲಕ್ಷ ಜನರಿಗೆ ಮಾತ್ರ ಸಾಕಾಗುತ್ತಿದೆ. ರಾಜ್ಯದಲ್ಲಿ ಆರ್ಥಿಕ ವರ್ಷ ಮುಗಿಯಲು ಇನ್ನೂ 6 ತಿಂಗಳಿದ್ದಾಗಲೆ ನರೇಗಾ ಟಾರ್ಗೆಟ್ ಮುಗಿದು ಹೋಗಿದೆ. ಬಸವರಾಜ ಬೊಮ್ಮಾಯಿ ಅವರು ಸುಳ್ಳು ಹೇಳಿಕೊಂಡು ಓಡಾಡುವ ಬದಲು ದೆಹಲಿಗೆ ಹೋಗಿ ನರೇಗಾ ಯೋಜನೆಗೆ ಬೇಡಿಕೆ ಆಧಾರಿತವಾಗಿ ಹೊಸ ಗುರಿ ನಿಗದಿ ಮಾಡಿಸಿಕೊಂಡು ಬರಲಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.