ಮಂಡ್ಯ, ಡಿ.06 (DaijiworldNews/PY): "ಇನ್ನು ಮುಂದೆ ನಾನು ಕಣ್ಣೀರು ಹಾಕುವುದಿಲ್ಲ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಶಪಥ ಹಾಕಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇನ್ನು ಮುಂದೆ ನಾನು ಕಣ್ಣೀರು ಹಾಕುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ಹಾಗೆಂದು ನಾನು ಕಟುಕ ಹೃದಯದವನು ಎಂದು ಭಾವಿಸಬೇಡಿ. ಜನರ ಕಷ್ಟವನ್ನು ನೋಡಿದಾಗ ನನ್ನ ಹೃದಯ ಮಿಡಿಯುತ್ತದೆ" ಎಂದಿದ್ದಾರೆ.
"ನಾನು ಸಿಎಂ ಆಗಿದ್ದ ಸಂದರ್ಭ ಕನಗನಮರಡಿ ಬಸ್ ದುರಂತ ಸಂಭವಿಸಿತ್ತು. ಆಗ ಅನೇಕರು ಮೃತಪಟ್ಟಿದ್ದರು. ಆ ದೃಶ್ಯವನ್ನು ಕಂಡು ನೋವಿನಿಂದ ಕಣ್ಣೀರಿಟ್ಟಿದ್ದೆ. ಆದರೆ, ಕೆಲವರು ಅದನ್ನೇ ಟವೆಲ್ನಲ್ಲಿ ಗ್ಲಿಸರಿನ್ ಹಚ್ಚಿ ಅಳುತ್ತಿದ್ದಾರೆ ಎಂದು ಹೇಳಿದ್ದರು" ಎಂದು ತಿಳಿಸಿದ್ದಾರೆ.
"ನಾನು ಗ್ಲಿಸರಿನ್ ಹಚ್ಚಿ ಅಥವಾ ಯಾವುದೇ ನಾಟಕೀಯವಾಗಿ ಕಣ್ಣೀರು ಹಾಕಿಲ್ಲ. ಜನರ ಸಂಕಷ್ಟವನ್ನು ಭಾವನಾತ್ಮಕವಾಗಿ ನೋಡಿದಾಗ ಕಣ್ಣೀರು ಬರುತ್ತದೆ" ಎಂದಿದ್ದಾರೆ.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, "ನಾನು ಮೈತ್ರಿ ಮಾಡಿಕೊಳ್ಳುವುದಾಗಿ ಎಲ್ಲಿಯೂ ಹೇಳಿಲ್ಲ. ಪರಿಷತ್ ಚುನಾವಣೆಯಲ್ಲಿ ಬಿಎಸ್ವೈ ಅವರು ನಮ್ಮ ಸಹಕಾರ ಕೇಳಿದ್ದಾರೆ. ಆದರೆ, ಆ ಬಗ್ಗೆ ನಾವಿನ್ನೂ ತೀರ್ಮಾನಿಸಿಲ್ಲ" ಎಂದು ಹೇಳಿದ್ದಾರೆ.