ಬೆಳಗಾವಿ, ಡಿ.06 (DaijiworldNews/PY): "ಬಿಜೆಪಿಗೆ ಸೇರಲಿಲ್ಲ ಎಂದು ನನ್ನನ್ನು ತಿಹಾರಿ ಜೈಲಿಗೆ ಕಳಿಸಿದ್ದರು" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಚಿವ ಈಶ್ವರಪ್ಪನಿಗೆ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಗೆ ಬೆಂಬಲ ಮಾಡಲಿಲ್ಲ ಎಂದು ನನ್ನನ್ನು ತಿಹಾರಿ ಜೈಲಿಗೆ ಕಳಿಸಿದ್ದರು. ಈ ಬಗ್ಗೆ ದಾಖಲೆ ಇದೆ" ಎಂದಿದ್ದಾರೆ.
ಕರ್ನಾಟದಲ್ಲಿ ಕಾಂಗ್ರೆಸ್ ಉಸಿರು ನಿಲ್ಲುತ್ತದೆ ಎಂಬ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಎಸ್ವೈ ಅವರಿಗಾದ ನೋವನ್ನು ಬಿಜೆಪಿಯ ಮೇಲೆ ಹಾಕಲು ಆಗುವುದಿಲ್ಲ. ಹಾಗಾಗಿ ಅವರ ಕೋಪವನ್ನು ಕಾಂಗ್ರೆಸ್ಸಿಗರ ಮೇಲೆ ಹಾಕುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಅನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ, ಅವರ ಪಕ್ಷದಲ್ಲಿ ಏನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ನಾವು ಸರ್ಕಾರದ ಸ್ಥಿರತೆಯನ್ನು ಹಾಳು ಮಾಡುತ್ತಿಲ್ಲ. ಬದಲಾಗಿ ಅವರ ಪಕ್ಷದವರೇ ಹಾಳು ಮಾಡುತ್ತಿದ್ಧಾರೆ" ಎಂದು ಟೀಕಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಅವರು, "ಎಲ್ಲೆಡೆ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದೇ ಕಾಂಗ್ರೆಸ್ನ ಗೆಲುವು. ಆದರೆ, ಬಿಜೆಪಿಯಲ್ಲಿ ಹಾಗಿಲ್ಲ, ಸಿಂಗಲ್ ಕ್ಯಾಂಡಿಟೇಟ್ ಹಾಕಿದ್ದಾರೆ. ಒಂದೇ ಸ್ಟೇಜ್, ಒಬ್ಬರೇ ಭಾಷಣ ಮಾಡುವಷ್ಟು ದುರ್ಬಲವಾಗಿದೆ ಎಂದು ನಾನು ತಿಳಿದುಕೊಂಡಿರಲಿಲ್ಲ" ಎಂದು ಲೇವಡಿ ಮಾಡಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಬಗ್ಗೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಬಂದ ಬಳಿಕ ಅಧಿವೇಶನ ಮಾಡಿರಲಿಲ್ಲ. ನಾವು ಒತ್ತಾಯ ಮಾಡಿದಾಗ ಒತ್ತಡದ ಮೇರೆಗೆ ಅಧಿವೇಶನ ಮಾಡುತ್ತಿದ್ದಾರೆ. ನಾವು ಬದಲಾವಣೆ ಮಾಡಿದರೆ ಸಾಮೂಹಿಕವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಪೀಕರ್ಗೆ ತಿಳಿಸಿದ್ದೆವು. ಇದರಿಂದಾಗಿ ಚಳಿಗಾಲದ ಅಧಿವೇಶನದ ನಡೆಯುತ್ತಿದೆ" ಎಂದಿದ್ದಾರೆ.