ಬೆಂಗಳೂರು, ಡಿ.06 (DaijiworldNews/PY): "ರಾಜ್ಯದ ಕೆಲವು ಶಾಲೆ-ಕಾಲೇಜುಗಳಲ್ಲಿಯೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಇದು ಸಹಜವಾಗಿ ಸರ್ಕಾರಕ್ಕೂ ಆತಂಕ ತಂದಿದೆ. ಕೆಲವು ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚಳ ಆತಂಕ ತಂದಿದೆ" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಸೋಂಕಿನ ತೀವ್ರತೆ ಕುರಿತು ತಜ್ಞರಿಂದ ಪ್ರತಿ ದಿನ ವರದಿಯನ್ನು ಪಡೆಯುತ್ತಿದ್ದೇವೆ. ಕೊರೊನಾ ತೀವ್ರತೆಯನ್ನು ಆಧರಿಸಿ, ಶಾಲಾ-ಕಾಲೇಜು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದಿದ್ದಾರೆ.
"ತಜ್ಞರು ನೀಡಿರುವ ವರದಿ ಪ್ರಕಾರ, ಯಾರೂ ಆತಂಕ ಪಡುವಂತೆ ಕೊರೊನಾ ತೀವ್ರತೆ ಇಲ್ಲ. ಕೊರೊನಾ ತೀವ್ರತೆ ಆಧರಿಸಿ, ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಿಎಂ, ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಕೊರೊನಾ ತೀವ್ರತೆ ಇಲ್ಲ. ಪೊಷಕರು ಆತಂಕಪಡಬಾರದು" ಎಂದು ಹೇಳಿದ್ದಾರೆ