ಬೆಂಗಳೂರು, ಡಿ.06 (DaijiworldNews/PY): "ಓಮ್ರಿಕಾನ್ ವೈರಸ್ ತೀವ್ರತೆ ಕಡಿಮೆ. ಆದರೆ, ಎಲ್ಲರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಓಮ್ರಿಕಾನ್ ರೂಪಾಂತರಿ ವೈರಸ್ ತೀವ್ರತೆ ಕಡಿಮೆ ಇದೆ. ಆದರೆ, ಮುಂಜಾಗ್ರತೆ ಮುಖ್ಯ. ಕರ್ನಾಟಕದಲ್ಲಿ ಇನ್ನೂ 70 ಲಕ್ಷ ಲಸಿಕೆ ದಾಸ್ತಾನು ಇದೆ. ಹಾಗಾಗಿ ಕಡ್ಡಾಯವಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.
"ಓಮ್ರಿಕಾನ್ ಕುರಿತು ಸಮಗ್ರ ಅಧ್ಯಯನ ನಡೆಯುತ್ತಿದೆ. ಅಧ್ಯಯನ ವರದಿ ನಂತರವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ನಾವು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಯಾವತ್ತೂ ಮೊದಲ ಅಲೆಗಿಂತ ಎರಡನೇ ಅಲೆ ತೀವ್ರವಾಗಿರುತ್ತದೆ. ಆದರೆ, ಬಳಿಕ ಬರುವ ಅಲೆಗಳು ಅಷ್ಟೊಂದು ತೀವ್ರವಾಗಿ ಇರುವುದಿಲ್ಲ. ಓಮ್ರಿಕಾನ್ ವೈರಸ್ ಮುಂದಿನ ದಿನಗಳಲ್ಲಿ ಸಾಯುತ್ತದೆ" ಎಂದಿದ್ದಾರೆ.