ನವದೆಹಲಿ, ಡಿ.06 (DaijiworldNews/PY): "ಬಿಜೆಪಿಗೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿರುವ ವಿಚಾರ ತಿಳಿದೇ ಇರಲಿಲ್ಲ. ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ ಆ ಬಗ್ಗೆ ಮಾಹಿತಿ ತಿಳಿದಿದ್ದು" ಎಂದು ಕೇಂದ್ರದ ಮಾಜಿ ಸಚಿವ, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾಯಕ್ ತಿಳಿಸಿದ್ದಾರೆ.
ನಾಯಕ್ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕುಳಿತುಕೊಂಡು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಯೋಧ್ಯೆಯಲ್ಲಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದರು.
ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನದ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ನಾನು 1992ರ ಡಿಸೆಂಬರ್ 6ರಂದು ಪಕ್ಷದ ಮುಖ್ಯ ಸಚೇತಕನಾಗಿದ್ದೆ. ಆ ವೇಳೆ ಸಂವಹನ ಕಷ್ಟವಾಗಿತ್ತು. ಸ್ಥಿರ ದೂರವಾಣಿಯ ಮೂಲಕ ಮಾಹಿತಿ ಪಡೆಯುತ್ತಿದ್ದೆವು. ಅಡ್ವಾಣಿ ಹಾಗೂ ವಾಜಪೇಯಿ ಅವರು ದೆಹಲಿಯಲ್ಲೇ ಇದ್ದರು" ಎಂದಿದ್ದಾರೆ.
"ಅಡ್ವಾಣಿ ಅವರು ಹಾಗೂ ಇತರ ಪಕ್ಷದ ನಾಯಕರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರ ಎನ್ನುವ ಮಾಹಿತಿ ನಮಗೆ ದೊರೆತಿತ್ತು. ಆ ನಂತರ ಏನಾಗುತ್ತದೆ ಎನ್ನುವ ಸುಳಿವೂ ಸಹ ನಮಗಿರಲಿಲ್ಲ. ಬಾಬರಿ ಮಸೀದಿಯ ಧ್ವಂಸದ ಬಳಿಕವಷ್ಟೇ ನಮಗೆ ಮಾಹಿತಿ ದೊರೆಯಿತು" ಎಂದು ತಿಳಿಸಿದ್ದಾರೆ.