ನವದೆಹಲಿ, ಡಿ.06 (DaijiworldNews/PY): ಡಿ.5ರಂದು ಲಕ್ನೋದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಆರೋಪದ ಕುರಿತು ಉತ್ತರ ಪ್ರದೇಶ ಸರ್ಕಾರವನ್ನು ತಮ್ಮದೇ ಪಕ್ಷದ ನಾಯಕ ವರುಣ್ ಗಾಂಧೀ ಟೀಕಿಸಿದ್ದು, ಈ ವಿಚಾರದ ಬಗ್ಗೆ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ವರುಣ್ ಗಾಂಧಿ ಮೇಲೆ ಕಿಡಿಕಾರಿದ್ದಾರೆ.
"ವರುಣ್ ಅವರು ಕಾಂಗ್ರೆಸ್ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅವರಲ್ಲಿ ನೈತಿಕತೆ ಉಳಿದಿದ್ದರೆ ಅಥವಾ ಬಿಜೆಪಿ ವಿರುದ್ದ ಮಾತನಾಡುವ ಮನಸ್ಸು ಮಾಡಿದ್ದರೆ ಹಾಗೂ ಕಾಂಗ್ರೆಸ್ ಅಥವಾ ಬೇರೆಡೆಗೆ ಹೋಗಲು ಬಯಸಿದರೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
"ವರುಣ್ ಗಾಂಧಿ ಅವರು ಪಕ್ಷದ ಘನತೆ ಹಾಗೂ ಶಿಸ್ತನ್ನು ಗೌರವಿಸಬೇಕು. ಬಿಜೆಪಿಯಲ್ಲಿರುವಾಗ ಅವರು ಪಕ್ಷದ ಶಿಸ್ತನ್ನು ಅನುಸರಿಸಬೇಕು" ಎಂದಿದ್ದಾರೆ.
ವರುಣ್ ಗಾಂಧಿ ಅವರು ಆಪಾದಿತ ಲಾಠಿ ಚಾರ್ಜ್ನ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, "ಇದೊಂದು ಅನಾಗರಿಕ ಲಾಠಿ ಚಾರ್ಜ್. ಅವರು ನಿಮ್ಮ ಮಕ್ಕಳಾಗಿದ್ದಲ್ಲಿ ನೀವು ಈ ರೀತಿ ಮಾಡುತ್ತಿದ್ದೀರಾ?. ನಿಮ್ಮಲ್ಲಿ ಖಾಲಿ ಹುದ್ದೆಗಳಿವೆ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಾ ಇದ್ದಾರೆ. ಹಾಗಾದರೆ, ನೀವು ಏಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ?" ಎಂದು ಪ್ರಶ್ನಿಸಿದ್ದರು.