ಬೆಳಗಾವಿ, ಡಿ.05 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಷಣ ಮಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದು, "ಈ ದೇಶದ ಸಾಲ ಮನ್ನಾ ಮಾಡಿದ್ದು ಮನಮೋಹನ್ ಸಿಂಗ್ ಎಂದು ಹೇಳುವ ಬದಲು ನರೇಂದ್ರ ಮೋದಿ" ಎಂದಿದ್ದಾರೆ.
ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮ ಕಾಂಗ್ರೆಸ್ ಪ್ರಚಾರದ ಸಂದರ್ಭ ಮಾತನಾಡಿದ ಅವರು, "ನಮ್ಮ ಪಕ್ಷಕ್ಕೆ 2023ರಲ್ಲಿ ಶೇ.100ರಷ್ಟು ಅಧಿಕಾರ ಬರುತ್ತದೆ. ಈ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ದೇಶದ ಸಾಲಮನ್ನ ಮಾಡಿದ್ದು ನರೇಂದ್ರ ಮೋದಿ ಎಂದು ಬಾಯ್ತಪ್ಪಿ ಹೇಳಿದ ಅವರು, ಬಳಿಕ ಕ್ಷಮಿಸಿ ಸಾಲ ಮನ್ನಾ ಮಾಡಿದ್ದ ಮನಮೋಹನ್ ಸಿಂಗ್" ಎಂದಿದ್ದಾರೆ.
"ಬಿಜೆಪಿಯವರು ಒಬ್ಬರನನ್ನು ನಿಲ್ಲಿಸಬೇಕಿತ್ತು. ಆದರೆ, ಇಬ್ಬರನ್ನು ನಿಲ್ಲಿಸಿದ್ದಾರೆ. ಬಿಜೆಪಿಯವರಿಗೆ ಇಬ್ಬರಿಗೆ ರಾಜಕಾರಣ ಮಾಡಿ ಗೊತ್ತಿದೆ. ಈ ಜಿಲ್ಲೆಯ ಲೀಡರ್ ರಮೇಶ್ ಜಾರಕಿಹೊಳಿ ಅವರು ಕಳೆದ ಬಾರಿ ನಮ್ಮ ಅಭ್ಯರ್ಥಿಯನ್ನು ಸೋಲಿಸಿ ಬಿಟ್ಟರು. ಈ ಬಾರಿ ಅವರ ತಮ್ಮನನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರೂ ಆಶ್ಚರ್ಯವಿಲ್ಲ" ಎಂದು ಹೇಳಿದ್ದಾರೆ.
"ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಇವರು ಒಂದು ಕೆಲಸವನ್ನಾದರೂ ಮಾಡಿದ್ದಾರಾ ಹೇಳಿ?. ಏಕೆ ಇವರಿಗೆ ಓಟ್ ಹಾಕಬೇಕು?. ಇವರಿಗೆ ಮಾನ, ಮರ್ಯಾದೆ ಬೇಕಲ್ವಾ?" ಎಂದು ಕೇಳಿದ್ದಾರೆ.
"ನಾನು ಸಿಎಂ ಆಗಿದ್ದ ಅವಧಿಯಲ್ಲಿ ವರ್ಷಕ್ಕೆ ಮೂರು ಲಕ್ಷ ಮನೆ ಕಟ್ಟಿ ಕೊಟ್ಟಿದ್ದೇನೆ. 7 ಕೆ.ಜಿ ಅಕ್ಕಿ ಕೊಟ್ಟಿದ್ದೇನೆ. ಈಗ 5 ಕೆ.ಜಿ ಕೊಡುತ್ತಾ ಇದ್ದಾರೆ. ಯಡಿಯೂರಪ್ಪ ಸಿಎಂ ಬಸವರಾಜ ಬೊಮ್ಮಾಯಿ ಅವರಪ್ಪನ ಮನೆಯಿಂದ ಕೊಡುತ್ತಿದ್ದಾರಾ ಅಕ್ಕಿನಾ?" ಎಂದು ಪ್ರಶ್ನಿಸಿದ್ದಾರೆ.
"ಐದು ರಾಜ್ಯಗಳಲ್ಲಿ ಸೋಯ ಬಳಿಕ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆದಿದ್ದಾರೆ. 700 ಮಂದಿ ರೈತರ ಸಾವಿಗೆ ಪ್ರಧಾನಿ ಮೋದಿ ಕಾರಣ. ಇವರಿಗೆ ಮೂರು ಕಾಸಿನ ಮರ್ಯಾದೆ ಇಲ್ಲ. ನಾನು ಕೊಟ್ಟ ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ ನಿಲ್ಲಿಸಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.