ನವದೆಹಲಿ, ಡಿ 05 (DaijiworldNews/MS): ನಾಗಾಲ್ಯಾಂಡ್ನ ಮೋನ್ ಜಿಲ್ಲೆಯ ತಿರು ಗ್ರಾಮದಲ್ಲಿ ಓಟಿಂಗ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ಸುಮಾರು 13 ಮಂದಿ ನಾಗರಿಕರು ಸಾವನ್ನಪ್ಪಿದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದವ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ " ಈ ಘಟನೆಯು ಹೃದಯವಿದ್ರಾವಕ ಘಟನೆ. ಭಾರತ ಸರ್ಕಾರವು ನಿಜವಾದ ಪ್ರತಿಕ್ರಿಯೆಯನ್ನು ನೀಡಬೇಕು. ನಮ್ಮ ಭೂಮಿಯನ್ನು ಭದ್ರತಾ ಸಿಬ್ಬಂದಿಗಳು ಆಗಲಿ ನಾಗರಿಕರು ಆಗಲಿ ಸುರಕ್ಷಿತವಾಗಿ ಇರದ ಈ ಸಂದರ್ಭದಲ್ಲಿ ಗೃಹ ಸಚಿವಾಲಯವು ಏನು ಮಾಡುತ್ತಿದೆ" ಎಂದು ಪ್ರಶ್ನಿಸಿದ್ದಾರೆ.
ಪ್ರಸ್ತುತ ವಿಧಾನಸಭೆಯ ಚಳಿಗಾಲ ಅಧಿವೇಶನವು ನಡೆಯುತ್ತಿದೆ. ಸೋಮವಾರ ನಾಗಾಲ್ಯಾಂಡ್ನಲ್ಲಿ ನಾಗರಿಕರ ಸಾವು ಸಂಬಂಧಿತ ವಿಚಾರವು ಹೆಚ್ಚು ಗದ್ದಲ ಸೃಷ್ಟಿ ಮಾಡುವ ಸಾಧ್ಯತೆಗಳು ಇದೆ.
ಈ ನಡುವೆ ನಾಗಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ಹೊಣೆಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ. ಆದರೆ ಭಾರತೀಯ ಸೇನೆಯ ಯೋಧರು ಉದ್ದೇಶ ಪೂರ್ವಕವಾಗಿ ಕೊಂದಿದ್ದಲ್ಲ ಎಂದು ಸೇನೆಯ ಅಸ್ಸಾಂ ರೈಫಲ್ಸ್ ಹೇಳಿಕೆ ನೀಡಿದೆ.
ಓಟಿಂಗ್ ಗ್ರಾಮದ ಸುಮಾರು 13 ಜನರ ಕೂಲಿ ಕಾರ್ಮಿಕರು ಕೆಲಸಕ್ಕೆಂದು ಸಮೀಪದ ಕಲ್ಲಿದ್ದಲು ಗಣಿಗೆ ಹೋಗಿದ್ದರು. ಸಂಜೆ ಕೆಲಸ ಮುಗಿದ ಬಳಿಕ ಒಂದು ಪಿಕ್ ಅಪ್ ವಾಹನದಲ್ಲಿ ಅವರೆಲ್ಲ ಮನೆಗೆ ಮರಳುತ್ತಿದ್ದರು. ಆದರೆ ಈ ಸಂದರ್ಭ ಭದ್ರತಾ ಪಡೆಯ ಗುಂಡಿನ ದಾಳಿಗೆ ಬಲಿಯಾಗಿದ್ದರು. ಮ್ಯಾನ್ಮಾರ್ನಲ್ಲಿ ನೆಲೆಗೊಂಡಿರುವ ನಿಷೇಧಿತ ಸಂಘಟನೆ ಎನ್ಎಸ್ಸಿಎನ್ (ಕೆ) ನ ಯುಂಗ್ ಆ್ಯಂಗ್ ಬಣದ ಉಗ್ರಗಾಮಿಗಳ ಗುಂಪೊಂದರ ಚಲನವಲನ ಈ ಪ್ರದೇಶದಲ್ಲಿ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರ ಅನ್ವಯ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿತ್ತು.