ಬೆಂಗಳೂರು, ಡಿ.05 (DaijiworldNews/PY): "ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಎಂಸಿ ಜತೆಗಿನ ನೆಂಟಸ್ಥಿಕೆ ಬಿಡಲು ಮನಸಿಲ್ಲ" ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಯುಪಿಎ ಎಲ್ಲಿದೆ ಎಂದು ನಿಮ್ಮ ಅಸ್ತಿತ್ವದ ಪ್ರಶ್ನೆ ಮಾಡಿದ್ದ ಮಮತಾ ಬ್ಯಾನರ್ಜಿಯವರು ಈ ಹಿಂದೆ ಸೋನಿಯಾ ಗಾಂಧಿಯವರ ಬಗ್ಗೆಯೂ ಕೊಂಕು ಮಾತನಾಡಿದ್ದರು. ಆದರೂ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಎಂಸಿ ಜತೆಗಿನ ನೆಂಟಸ್ಥಿಕೆ ಬಿಡಲು ಮನಸಿಲ್ಲ. ಖರ್ಗೆಯವರೇ, ಜೀವನದಲ್ಲಿ ಕಿಂಚಿತ್ತಾದರೂ ಸ್ವಾಭಿಮಾನ ಬೇಕಲ್ಲವೇ?" ಎಂದು ಕೇಳಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ದೆಹಲಿಗೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ಸಂದರ್ಭ ದೀದಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿರಲಿಲ್ಲ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೀದಿ, "ರಾಷ್ಟ್ರದಲ್ಲಿ ಯುಪಿಎ ಉಳಿದಿಲ್ಲ. ಆಸರೆ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಹೋರಾಡಲು ಸಮಾನ ಮನಸ್ಕ ಪ್ರತಿಪಕ್ಷಗಳನ್ನು ಒಟ್ಟುಗೂಡಲು ಕರೆ ನೀಡಲಾಗಿದೆ" ಎಂದಿದ್ದರು.