ಶಿವಮೊಗ್ಗ, ಡಿ.05 (DaijiworldNews/HR): ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದಲ್ಲಿರುವ ಗುಂಪುಗಾರಿಕೆ ಮುಚ್ಚಿಹಾಕಲು ಕಾಂಗ್ರೆಸ್ಸಿಗರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಸಂಬಂಧಿಸಿದ ವಿಚಾರ ನಾನು ಯಾವಾಗಲಾದರೂ ಮಾತನಾಡುತ್ತೇನೆ. ಅದನ್ನು ಕೇಳಲು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಯಾರು. ಹೈಕಮಾಂಡ್ ಇರಲಿ ಲೋ ಕಮಾಂಡ್ ಇರಲಿ. ನನ್ನನ್ನು ಪ್ರಶ್ನೆ ಕೇಳಲು ಸಿದ್ದರಾಮಯ್ಯ, ಶಿವಕುಮಾರ್ ಯಾರು?" ಎಂದು ಪ್ರಶ್ನಿಸಿದ್ದಾರೆ.
ಇನ್ನು ನಮ್ಮ ಪಕ್ಷದಲ್ಲಿ ಯಾವದೇ ಗೊಂದಲವೂ ಇಲ್ಲ. ಆದರೆ ಕಾಂಗ್ರೆಸ್ಸಿಗರೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಅವರ ಪಕ್ಷವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿಯಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಮಾತನಾಡಿ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ" ಎಂದರು.
ಜಲಶಕ್ತಿ ಅಭಿಯಾನದಲ್ಲಿ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದು, ನರೇಗಾ ಯೋಜನೆಯಲ್ಲಿ 13 ಕೋಟಿ ಮಾನವ ದಿನದ ಗುರಿ ನೀಡಲಾಗಿತ್ತು. ನವೆಂಬರ್ ತಿಂಗಳಲ್ಲೇ ನಾವು ಗುರಿಯನ್ನು ಮೀರಿದ್ದೇವೆ. ಆದರೆ ಕಾಂಗ್ರೆಸ್ಸಿಗರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.