ಚೆನ್ನೈ, ಡಿ.05 (DaijiworldNews/PY): ತಮಿಳು ಭಾಷೀಕರಿಗೆ ಸ್ಥಳೀಯ ಉದ್ಯೋಗ ಸಿಗಬೇಕು ಎನ್ನುವ ಉದ್ಧೇಶದೊಂದಿಗೆ ತಮಿಳುನಾಡು ಸರ್ಕಾರ ಎಲ್ಲಾ ಸರ್ಕಾರಿ ನೌಕರರಿಗೆ ತಮಿಳು ಭಾಷೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
"ಸರ್ಕಾರಿ ನೌಕರಿ ಬೇಕೆಂದರೆ ಇನ್ನುಮುಂದೆ ತಮಿಳು ಭಾಷಾ ವಿಷಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ" ಎಂದು ರಾಜ್ಯ ಸರ್ಕಾರ ತಿಳಿಸಿದೆ.
"ರಾಜ್ಯದ ಸರ್ಕಾರ ನೌಕರರಿಗೆ ತಮಿಳು ಜ್ಞಾನ ಇರಬೇಕು, ಜನರಿಗೆ ಸರ್ಕಾರಿ ಸೇವೆಗಳು ಮಾತೃಭಾಷೆಯಲ್ಲಿ ದೊರಕಬೇಕು" ಎಂದು ಹೇಳಿದೆ.
"ರಾಜ್ಯ ಶಿಕ್ಷಕರ ನೇಮಕಾತಿ ಪರೀಕ್ಷೆ, ವೈದ್ಯಕೀಯ ನೇಮಕಾತಿ ಪರೀಕ್ಷೆ, ಯೂನಿಫಾರ್ಮ್ಡ್ ರಿಕ್ರೂಟ್ಮೆಂಟ್ ಬೋರ್ಡ್, ತಮಿಳುನಾಡು ಅರಣ್ಯ ಸೇವೆ ಮುಂತಾದ ಎಲ್ಲಾ ರಾಜ್ಯದ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಳಿಗೆ ಇದೇ ನಿಯಮ ಅನ್ವಯಿಸಲಿದ್ದು, ಆಯಾ ಮಂಡಳಿಗಳು ಶೀಘ್ರದಲ್ಲೇ ಆದೇಶ ಹೊರಡಿಸಲಿವೆ" ಎಂದು ತಿಳಿಸಿದೆ.
ಇನ್ನು ಮುಂದೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಿ ಉದ್ದಿಮೆಗಳಿಗೆ ನೇಮಕಾತಿ ಮಾಡಿಕೊಳ್ಳಲು ತಮಿಳುನಾಡು ಲೋಕಸೇವಾ ಆಯೋಗ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 10ನೇ ತರಗತಿಯಲ್ಲಿ ತಮಿಳಿನಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ. ಅದರಲ್ಲಿ ಕನಿಷ್ಠ 40 ಅಂಕಗಳನ್ನು ಪಡೆದು ಉತ್ತೀರ್ಣರಾದರೆ ಮಾತ್ರ ಅಭ್ಯರ್ಥಿಯು ಟಿಎನ್ಪಿಎಸ್ಸಿ ಪರೀಕ್ಷೆಯಲ್ಲಿ ಬರೆದ ಇನ್ನಿತರ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲಾಗುತ್ತದೆ . ಈ ನಿಯಮ ತಕ್ಷಣ ದಿಂದಲೇ ಜಾರಿಗೆ ಬರಲಿದೆ. ಡಿ.1ರಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.