ಕೊಹಿಮಾ, ಡಿ.05 (DaijiworldNews/HR): ನಾಗಾಲ್ಯಾಂಡ್ನ ಮಾನ್ ಜಿಲ್ಲೆಯ ಒಟಿಂಗ್ನಲ್ಲಿ ಶನಿವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಅನೇಕ ಮಂದಿ ಗ್ರಾಮಸ್ಥರು ಹಾಗೂ ಓರ್ವ ಭದ್ರತಾ ಪಡೆಯ ಯೋಧನು ಕೂಡ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಘಟನಾ ಸ್ಥಳದಲ್ಲಿ ಇದುವರೆಗೂ 6 ಶವಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇನ್ನು ಹೆಚ್ಚಿನ ಶವಗಳು ಸಿಗಬಹುದೆಂದು ಅಂದಾಜಿಸಲಾಗಿದೆ.
ಈ ಘಟನೆಯ ಕುರಿತು ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಟ್ವೀಟ್ ಮಾಡಿದ್ದು, ಇದು 'ಅತ್ಯಂತ ಖಂಡನೀಯ'. ನ್ಯಾಯವನ್ನು ಒದಗಿಸಲು 'ಉನ್ನತ ಮಟ್ಟದ' ವಿಶೇಷ ತನಿಖಾ ತಂಡವು ' ಪ್ರಕರಣದ ತನಿಖೆಯನ್ನು ಮಾಡುತ್ತದೆ. ಸಮಾಜದ ಎಲ್ಲ ವರ್ಗದವರೂ ಶಾಂತಿಯಿಂದ ಇರಬೇಕು" ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, "ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ರಾಜ್ಯ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಎಸ್ಐಟಿಯು ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ನಡೆಸಿ ದುಃಖಿತ ಕುಟುಂಬಗಳಿಗೆ ನ್ಯಾಯವನ್ನು ಒದಗಿಸುತ್ತದೆ" ಎಂದು ಹೇಳಿದ್ದಾರೆ.
ಇನ್ನು ಬಂಡುಕೋರರ ಬಗ್ಗೆ ದೊರೆತ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ತಿರು-ಓಟಿಂಗ್ ರಸ್ತೆಯಲ್ಲಿ ದಾಳಿ ನಡೆಸಲು ಹೊಂಚು ಹಾಕಿದ್ದರು, ಆದರೆ ಗ್ರಾಮಸ್ಥರನ್ನು ದಂಗೆಕೋರರು ಎಂದು ತಪ್ಪಾಗಿ ಭಾವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಘಟನೆಯ ನಂತರ ಕೋಪಗೊಂಡ ಸ್ಥಳೀಯರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ವಾಹನಗಳು ಭದ್ರತಾ ಪಡೆಗಳಿಗೆ ಸೇರಿದವು ಎಂದು ವರದಿಯಾಗಿದೆ.