ಬೆಂಗಳೂರು, ಡಿ 05 (DaijiworldNews/MS): ಕೋವಿಡ್ 1ನೇ ಅಲೆಯ ವೇಳೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕೋವಿಡ್ ಲಸಿಕೆಯ 1ನೇ ಡೋಸ್ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಬಿ.ಕಕ್ಕಿಲಾಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶನಿವಾರ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಲಸಿಕೆ ಹಾಕಿಸಿಕೊಳ್ಳದವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುವ ಶಾಲಾ- ಕಾಲೇಜು ಹೋಗಿ ಅಲ್ಲಿರುವವರನ್ನು ಅಪಾಯಕ್ಕೆ ದೂಡುವುದನ್ನು ನ್ಯಾಯಾಲಯ ಬಯಸುವುದಿಲ್ಲ ಹಾಗಾಗಿ ಈ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿದೆ.
ಕೊರೊನಾ ನಿಯಂತ್ರಣ , ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿ ೨೦೨೦ ಮಾರ್ಚ್ನಿಂದ ಸಲ್ಲಿಕೆಯಾಗಿದ್ದ ಸುಮಾರು 20 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಾಲಯದ ನಿರ್ದೇಶವಿದ್ದರೂ ಕೊವೀಡ್ ಮಾರ್ಗ ಸೂಚಿಗಳನ್ನು ಉಲ್ಲಂಘಿಸುವ ಗಣ್ಯರ ವಿರುದ್ದ ಸರ್ಕಾರ ಪರಿನಾಮಕಾರಿಯಾಗಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅರ್ಜಿದಾರರರೊಬ್ಬರ ಪರ ವಕೀಲರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರದ ಏನೂ ಮಾಡಿಲ್ಲ ಎನ್ನುವ ವಾದವನ್ನು ನ್ಯಾಯಾಲಯ ಒಪ್ಪುವುದಿಲ್ಲಎಂದು ಹೈಕೋರ್ಟ್ ಹೇಳಿದೆ.