ಮಥುರಾ, ಡಿ.05 (DaijiworldNews/PY): "ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನವಾದ ಡಿ.6ರಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ವಹಿಸಲಾಗುತ್ತಿದ್ದು, ಮಥುರಾದಲ್ಲೂ ಸಹ ಭದ್ರತೆ ಹೆಚ್ಚಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
1992ರ ಡಿ.6ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು.
ಡಿ.6ರಂದು ಕಾರ್ಯಕ್ರಮಗಳನ್ನು ಆಯೋಜಿಸಲು ಅಖಿಲ ಭಾರತ ಹಿಂದೂ ಮಹಾಸಭಾ, ಶ್ರೀಕೃಷ್ಣ ಜನ್ಮಭೂಮಿ ನಿರ್ಮಾಣ್ ನ್ಯಾಸ್, ನಾರಾಯಣಿ ಸೇನಾ ಹಾಗೂ ಶ್ರೀಕೃಷ್ಣ ಮುಕ್ತಿ ದಳಗಳು ಈ ಹಿಂದೆ ಅನುಮತಿ ಕೋರಿದ್ದವು.
"ಮಥುರಾವು ಕೃಷ್ಣ ಜನ್ಮ ಸ್ಥಳವಾಗಿದ್ದು, ಅಲ್ಲಿ ಕೃಷ್ಣನ ಪ್ರತಿಮೆ ಸ್ಥಾಪಿಸಲು ಅವಕಾಶ ಕಲ್ಪಿಸಬೇಕು" ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮನವಿ ಮಾಡಿತ್ತು.
ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಾಹಲ್ ಈ ಮನವಿಯನ್ನು ತಿರಸ್ಕರಿಸಿದ್ದು, "ಶಾಂತಿ ಕದಡುವ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ" ಎಂದಿದ್ದರು.
ಮಸೀದಿಯಲ್ಲಿ ಮಹಾ ಜಲಾಭಿಷೇಕ ನಡೆಸಿ ಶುದ್ದೀಕರಭ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹಿಂದೂ ಸಂಘಟನೆ ತಿಳಿಸಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, "ಭದ್ರತಾ ಕಾರಣಗಳಿಂದ ಮಥುರಾನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕೇಶವ ದೇವ ಮಂದಿರ ಹಾಗೂ ಶಾಹಿ ಈದ್ಗಾ ಇರುವ ಪ್ರದೇಶವನ್ನು ರೆಡ್ ಝೋನ್ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ" ಎಂದಿದ್ದಾರೆ.
ಈ ಕುರಿತು ಮಥುರಾ ಎಸ್ಎಸ್ಪಿ ಗೌರವ್ ಗ್ರೋವರ್ ಮಾತನಾಡಿದ್ದು, "ಮಥುರಾ ಪ್ರವೇಶ ದ್ವಾರದ ಬಳಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ತಪಾಸಣೆ ಸಹ ತೀವ್ರಗೊಳಿಸಲಾಗಿದೆ" ಎಂದಿದ್ದಾರೆ.