ನವದೆಹಲಿ, ಡಿ.04 (DaijiworldNews/PY): ಪೊಲೀಸರ ವಿರುದ್ದ ನೀಡಿರುವ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟನೆ ನೀಡಿದ್ದು, "ಎಲ್ಲಾ ಪೊಲೀಸರನ್ನು ನಾನು ಗುರಿಯಾಗಿಸಿಕೊಂಡಿಲ್ಲ. ಆದರೆ, ಅವರ ವರ್ಗವನ್ನು ಗುರಿಯಾಗಿಸಿಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೊಲೀಸರ ಬಗ್ಗೆ ನನಗೆ ಗೌರವವಿದೆ. ಆದರೆ, ಕೆಲವು ಪೊಲೀಸರು ಇಲಾಖೆಗೆ ಕೆಟ್ಟ ಹೆಸರು ತರುತ್ತಾರೆ" ಎಂದು ಹೇಳಿದ್ದಾರೆ.
"ಕೆಲವು ಪೊಲೀಸ್ ಠಾಣೆಗಳ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ದ ನಾನು ಹೇಳಿಕೆ ನೀಡಿದ್ದೇನೆ. ಜಾನುವಾರು ಕಳ್ಳತನದ ವಿರುದ್ದ ಹಲವಾರು ದೂರುಗಳನ್ನು ಸ್ವೀಕರಿಸಿದ ಬಳಿಕ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಬಳಿಕ ನಾನು ಅಸಮಾಧಾನಗೊಂಡಿದ್ದೇನೆ" ಎಂದಿದ್ದಾರೆ.
ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಗೋವುಗಳ ಅಕ್ರಮ ಸಾಗಾಟವನ್ನು ತಡೆಯದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೈಗೆಟುಕುವ ಸಂಬಳ ನೀಡುತ್ತಿದ್ದರೂ ಪೊಲೀಸರು ನಾಯಿಗಳಂತೆ ಲಂಚ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ಗುರುವಾರ ಚಿಕ್ಕಮಗಳೂರಿನಲ್ಲಿ ನಿಯೋಜಿತ ಪೊಲೀಸ್ ಅಧಿಕಾರಿಗೆ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.