ಹಾಪುರ್, ಡಿ 04 (DaijiworldNews/MS): ಉತ್ತರ ಪ್ರದೇಶದ ಹಾಪುರ್ ಪಟ್ಟಣದಲ್ಲಿ ತನ್ನ ಮನೆಯ ಸನಿಹದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಆರು ಬಾಲಕಿಯ ಮೃತದೇಹವು ನೆರೆಮನೆಯಾತನ ಟ್ರಂಕ್ ನಲ್ಲಿ ತುಂಬಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗುರುವಾರ ಸಂಜೆ ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿ ಸಂಜೆ 5.30 ರ ವೇಳೆಗೆ ತನ್ನ ತಂದೆ ಬಳಿ 5 ರೂ. ಕೇಳಿ ಪಡೆದು ಅಂಗಡಿಗೆ ತಿನಿಸು ತರಲೆಂದು ಹೋಗಿದ್ದಳು. ಆದರೆ ಬಳಿಕ ಬಾಲಕಿ ಹಿಂತಿರುಗದೆ ನಾಪತ್ತೆಯಾಗಿದ್ದಳು. ಬಾಲಕಿಗಾಗಿ ಹುಡುಕಾಡಿದ ಪೋಷಕರು ಹಾಗೂ ಸ್ಥಳೀಯರು ಮರುದಿನ ಪೊಲೀಸರಿಗೆ ದೂರು ಸಲ್ಲಿಸಿದ್ದರು.
"ಆರು ವರ್ಷದ ಬಾಲಕಿ ಕಾಣೆಯಾಗಿರುವ ಬಗ್ಗೆ ನಿನ್ನೆ ದೂರು ಬಂದಿದ್ದು, ಇಂದು ನಮಗೆ ನೆರೆಮನೆಯಿಂದ ಅಹಿತಕರ ವಾಸನೆ ಬರುತ್ತಿದೆ ಎಂದು ನಮಗೆ ಮಾಹಿತಿ ದೊರಕಿತು. ಪೊಲೀಸ್ ತನಿಖಾ ತಂಡ ಅಲ್ಲಿಗೆ ತಲುಪಿದಾಗ ಬಾಗಿಲಿಗೆ ಬೀಗ ಹಾಕಿದ್ದು ಬೀಗ ಮುರಿದು ಕಟ್ಟಡವನ್ನು ಪ್ರವೇಶಿಸಿ ಹುಡುಕಿದಾಗ, ಬಾಲಕಿಯ ಶವವೂ ದೊಡ್ಡದ ಟ್ರಂಕ್ ನಲ್ಲಿ ಇರಿಸಿರುವುದು ಕಂಡುಬಂತು. ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ . ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದು ಟ್ರಂಕ್ ನಲ್ಲಿಟ್ಟಿರುವ ಸಾಧ್ಯತೆ ಇದ್ದು, ಆರೋಪಿ ಕಟ್ಟಡ ಮಾಲೀಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಹಾಪುರ್ ಪೊಲೀಸ್ ಎಸ್ಪಿ ಸರ್ವೇಶ್ ಕುಮಾರ್ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಬಳಿಕ ಆರೋಪಿಯ ವಿರುದ್ದ ಸ್ಥಳೀಯರು ಆಕ್ರೋಶಗೊಂಡಿದ್ದು, ಪೊಲೀಸರು ವಶಕ್ಕೆ ಪಡೆದುಕೊಳ್ಳುವಾಗ ಸ್ಥಳೀಯರು ಆತನ ಮೇಲೆ ಮುಗಿಬಿದ್ದು ದಾಳಿ ನಡೆಸಿದ್ದಾರೆ.ಆರೋಪಿಯು ಬಾಲಕಿಯನ್ನು ತನ್ನ ಬೈಕ್ನಲ್ಲಿ ಕುಳ್ಳಿರಿಸಿಸಿಕೊಂಡು ಆತನ ಮನೆಗೆ ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.