ಬೆಂಗಳೂರು, ಡಿ 04 (DaijiworldNews/MS): ಪೊಲೀಸರನ್ನ ನಾಯಿಗೆ ಹೋಲಿಸಿದ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ. ರೈತ ಸಂಘ, ಹಸಿರು ಸೇನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಗೃಹ ಸಚಿವರ ಹೇಳಿಕೆಯಿಂದ ಸಾರ್ವಜನಿಕರಿಗೆ ಪೊಲೀಸರ ಮೇಲೆ ಗೌರವ ಕಡಿಮೆಯಾಗುತ್ತದೆ. ಸಮಾಜದ ಶಾಂತಿ, ಮಕ್ಕಳು, ಮಹಿಳೆಯರ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಹಗಲಿರುಳೆನ್ನದೆ ಪೊಲೀಸರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆ. ಅಂತಹ ಪೊಲೀಸರನ್ನ ನಾಯಿಗೆ ಹೋಲಿಸಿರುವುದು ಖಂಡನೀಯ ಅಂತ ರೈತ ಮುಖಂಡ ನವೀನ್ ಕುರುವಾನೆ ಎಂಬುವವರು ದೂರು ದಾಖಲಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೋವುಗಳ ಅಕ್ರಮ ಸಾಗಾಟವನ್ನು ತಡೆಯದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೈಗೆಟುಕುವ ಸಂಬಳ ನೀಡುತ್ತಿದ್ದರೂ ಪೊಲೀಸರು ನಾಯಿಗಳಂತೆ ಲಂಚ ಪಡೆಯುತ್ತಿದ್ದಾರೆ ಎಂದು ಸಚಿವರು ಹೇಳಿದ್ದರು. ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ಗುರುವಾರ ಚಿಕ್ಕಮಗಳೂರಿನಲ್ಲಿ ನಿಯೋಜಿತ ಪೊಲೀಸ್ ಅಧಿಕಾರಿಗೆ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.