ಬೆಂಗಳೂರು, ಡಿ.04 (DaijiworldNews/PY): ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ (83) ಅವರು ಇಹಲೋಕ ತ್ಯಜಿಸಿದ್ದಾರೆ.
ಮನೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ತಂದೆ ನಿಧನ ಹೊಂದಿದ ವಿಚಾರವನ್ನು ಶಿವರಾಂ ಅವರ ಪುತ್ರ ಲಕ್ಷ್ಮೀಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇವರು ಪೋಷಕ ನಟ ಮಾತ್ರವಲ್ಲದೇ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.
ಶಿವರಾಂ ಅವರು ತಮ್ಮ ಸಹೋದರ, ಎಸ್ ರಾಮನಾಥ್ ಅವರೊಂದಿಗೆ ಸೇರಿಕೊಂಡು 1972 ರಲ್ಲಿ ಹೃದಯ ಸಂಗಮವನ್ನು ನಿರ್ದೇಶಿಸುವುದರೊಂದಿಗೆ ರಾಶಿ ಬ್ರದರ್ಸ್ ಹೆಸರಿನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದ್ದರು.
1958ರಲ್ಲಿ ಸಿನಿಮಾ ಲೋಕಕ್ಕೆ ಕಾಲಿಟ್ಟ ಶಿವರಾಂ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಸೇವೆಗಳನ್ನು ನೀಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದ ಶಿವರಾಂ ಬಳಿಕ ಪೋಷಕ ಪಾತ್ರದಲ್ಲಿ ಮಿಂಚಿದ್ದರು.
ಇವರು ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲುಜೇನು, ಹೊಂಬಿಸಿಲು, ಗುರು-ಶಿಷ್ಯರು ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ಹೊಸಕೇರೆ ಹಳ್ಳಿ ಬಳಿ ಸಂಭವಿಸಿದ ಅಪಘಾತದಿಂದ ಶಿವರಾಂ ಅವರ ತಲೆಗೆ ಬಲವಾದ ಏಟು ಬಿದ್ದ ಹಿನ್ನೆಲೆಯಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗೆ ಅವರು ಕೋಮಾಕ್ಕೆ ತಲುಪಿ, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಿದ್ದ, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದರು. ಆದರೆ, ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.