ಮೈಸೂರು, ಡಿ.04 (DaijiworldNews/PY): "ಜೆಡಿಎಸ್ ಪಕ್ಷವನ್ನು ಜೆಡಿಎಫ್ ಎಂದು ಮರುನಾಮಕರಣ ಮಾಡಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, "ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯಗೆ ಮಾತನಾಡುವ ಹಕ್ಕು ಏನಿದೆ?" ಎಂದು ಕೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆಪಿಸಿಸಿ ಅಧ್ಯಕ್ಷರ ಕುಟುಂಬದ ನಾಲ್ವರು ರಾಜಕಾರಣದಲ್ಲಿದ್ಧಾರೆ. ಸಿದ್ದರಾಮಯ್ಯ ಅವರ ಪುತ್ರ ಶಾಸಕರಾಗಿದ್ದಾರೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ಸಿಗರು ಕಾನೂನು ಜಾರಿ ಮಾಡಲಿ. ತಮ್ಮ ಸಾಮರ್ಥ್ಯದಿಂದ ತಿದ್ದುಪಡಿ ಮಾಡಲಿ. ಕುಟುಂಬದಿಂದ ಇಷ್ಟೇ ಮಂದಿ ರಾಜಕಾರಣಕ್ಕೆ ಬರಬೇಕು ಎಂದು ನಿಯಮ ಮಾಡಲಿ" ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯ ಬಿ ಟೀ ಜೆಡಿಎಸ್ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ನೀಡಿದ ಅವರು, "ತಮ್ಮ ಬಾಯಿಗೆ ಸಿದ್ದರಾಮಯ್ಯ ಅವರು ಸುಮ್ಮನೆ ಶ್ರಮ ನೀಡುತ್ತಿದ್ಧಾರೆ. ಈ ರೀತಿ ಸಿದ್ದರಾಮಯ್ಯ ಇಂದು ಸ್ಲೇಟ್ ಅನ್ನು ಕುತ್ತಿಗೆಗೆ ಹಾಕಿಕೊಂಡು ಊರೆಲ್ಲಾ ಓಡಾಡಲಿ. ಅವರೇಕೆ ಸುಮ್ಮನೆ ಬಾಯಿ ನೋವು ಮಾಡಿಕೊಳ್ಳುತ್ತಾರೆ?. ಅವರು 2018ರಿಂದಲೂ ಇದನ್ನೇ ಹೇಳುತ್ತಾ ಬರುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾಗುತ್ತದೆ. ಇದರ ಪರಿಣಾಮ 2023ರಲ್ಲಿ ಜೆಡಿಎಸ್ ಲಾಭ ಪಡೆಯುತ್ತದೆ" ಎಂದಿದ್ದಾರೆ.