ಬೆಂಗಳೂರು, ಡಿ.04 (DaijiworldNews/PY): "ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ತಯಾರಿ ನಡೆಸಲಾಗಿದ್ದು, ಸುವರ್ಣಸೌಧಕ್ಕೆ 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಅಧಿವೇಶನದ ಬಗ್ಗೆ ಅಗತ್ಯವಾದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ" ಎಂದಿದ್ದಾರೆ.
"ಓಮ್ರಿಕಾನ್ ಸೋಂಕು ವೇಗವಾಗಿ ಹರಡುತ್ತಾರೆ ಎನ್ನುತ್ತಿದ್ದಾರೆ. ಆದರೆ, ಓಮ್ರಿಕಾನ್ ಪರಿಣಾಮ ಮಾತ್ರ ಕಡಿಮೆ ಇದೆ. ಓಮ್ರಿಕಾನ್ ಸೋಂಕಿನ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಓಮ್ರಿಕಾನ್ ಸೋಂಕಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ" ಎಂದು ಹೇಳಿದ್ದಾರೆ.
"ಮೊದಲ ಕೊರೊನಾ ಪ್ರಕರಣಗಳಿಗೆ ಕ್ಲಸ್ಟರ್ ಎಂದು ಕರೆಯಲಾಗುತ್ತಿತ್ತು. ಈಗ ಮೂರು ಪ್ರಕರಣಗಳಿಗೆ ಕ್ಲಸ್ಟರ್ ಮಾಡಲಾಗುತ್ತಿದೆ. ಅಪಾರ್ಟ್ಮೆಂಟ್ ಭೇಟಿಗೂ ಸಹ ಇನ್ನು ಮುಂದೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ" ಎಂದಿದ್ದಾರೆ.