ನವದೆಹಲಿ, ಡಿ 04 (DaijiworldNews/MS): 'ನಾನೆಂದರೆ ಪ್ರಧಾನಿ ಮೋದಿಗೆ ಭಯ' ಎಂಬ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ ಎಂ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವ್ಯಂಗ್ಯವಾಡಿರುವ ಬಿಜೆಪಿಯೂ "ಅಧಿಕಾರವಿಲ್ಲದೆ ಬದುಕು ಅಸಹನೀಯ ಅನ್ನಿಸುತ್ತಿರಬೇಕು, ಹಿಂಬಾಗಿಲ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದು, ಅದಕ್ಕಾಗಿಯಲ್ಲವೇ? ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, " ಮಾನ್ಯ ಖರ್ಗೆಯವರೇ, ಮೋದಿಗೆ ನಿಮ್ಮನ್ನು ಕಂಡರೆ ಭಯವೇ? ಲೋಕಸಭಾ ಚುನಾವಣಾ ಸೋಲಿನ ನೋವು ನಿಮ್ಮನ್ನು ಈಗಲೂ ನಿದ್ರೆ ಮಾಡಲು ಬಿಡುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು. ನಿದ್ದೆಗೆಟ್ಟಾಗ, ಆರೋಗ್ಯ, ಮನಸು, ಬುದ್ಧಿ, ಮಾತು ಎಲ್ಲವೂ ಕೆಡುತ್ತದೆ. ಯಾರನ್ನು ಸೋಲಿಸಬೇಕು ಯಾರ ಕೈ ಹಿಡಿಯಬೇಕೆಂದು ಜನ ನಿರ್ಧರಿಸುತ್ತಾರ" ಎಂದು ಹೇಳಿದೆ.
ಮಾನ್ಯ ಖರ್ಗೆಯವರೇ, ನೀವು ಈಗ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ನಿಮ್ಮ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡುತ್ತಿದ್ದೀರಿ. ನಾಳೆ ಆ ಅಭ್ಯರ್ಥಿ ಸೋತರೆ, ನಾನು ಮೋದಿ ವಿರುದ್ಧ ಮಾತನಾಡಿದೆ. ಅದಕ್ಕಾಗಿ ಬಿಜೆಪಿಯವರು ನಮ್ಮ ಅಭ್ಯರ್ಥಿಯನ್ನು ಸೋಲಿಸಿದರು ಎಂದು ನೊಂದುಕೊಳ್ಳಬೇಡಿ. ನೀವು ಹೋದಲ್ಲೆಲ್ಲ ಸೋಲು ಕಟ್ಟಿಟ್ಟಬುತ್ತಿ! ಲೇವಡಿ ಮಾಡಿದೆ.
ಖರ್ಗೆಯವರೇ, ನಿಮ್ಮ ಸೋಲಿಗೆ ನೀವು ಕೊಡುತ್ತಿರುವ ಕಾರಣ "ಪಿಳ್ಳೆ ನೆವ" ಎಂಬಂತಿದೆ. ನಿಮ್ಮ ದುರಾಡಳಿತ, ಕುಟುಂಬ ರಾಜಕಾರಣ, ಪುತ್ರ ವ್ಯಾಮೋಹ, ಭ್ರಷ್ಟಾಚಾರದಿಂದ ರೋಸಿ ಹೋದ ಜನರು ನಿಮ್ಮನ್ನು ಸೋಲಿಸಿದ್ದರು. ಆ ಸೋಲಿಗೆ ನೀವು ಅನ್ಯರನ್ನು ಹೊಣೆಯಾಗಿಸಬೇಡಿ.ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಹಾಕುವುದೇ ಪ್ರತಿಸ್ಪರ್ಧಿಯನ್ನು ಸೋಲಿಸುವುದಕ್ಕೆ.
ಖರ್ಗೆಯವರೇ ಕಾಂಗ್ರೆಸ್ ಪಕ್ಷದ ವಲಯದಲ್ಲಿ ನಿಮ್ಮ ಬಗ್ಗೆ ಒಂದು ಮಾತಿದೆ. ನಿಮಗೂ ಗೊತ್ತಿರಬಹುದು. ಖರ್ಗೆಯವರು ರಾಜಕೀಯಕ್ಕೆ ಬಂದಾಗಿನಿಂದ ಸರ್ಕಾರಿ ವೆಚ್ಚದಲ್ಲೇ ಬದುಕಿದ್ದು ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತದೆ. ಅಧಿಕಾರವಿಲ್ಲದೆ ಬದುಕು ಅಸಹನೀಯ ಅನ್ನಿಸುತ್ತಿರಬೇಕು, ಹಿಂಬಾಗಿಲ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದು ಅದಕ್ಕಾಗಿಯಲ್ಲವೇ? ಎಂದು ವ್ಯಂಗ್ಯವಾಡಿದೆ.